ಶಿವಮೊಗ್ಗ : ನಗರದ ದತ್ತಾತ್ರೇಯ ಸ್ವಾಮಿ ದೇವಸ್ಥಾನದ ಲಿಫ್ಟ್‌ನಲ್ಲಿ ಸಿಲುಕಿ 80 ವರ್ಷದ ವೃದ್ಧರೊಬ್ಬರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ವಿನೋಬನಗರದ ಶಿವಪ್ಪನಾಯಕ ಬಡಾವಣೆಯ ನಿವಾಸಿ, ನಿವೃತ್ತ ಇಂಜಿನಿಯರ್ ಕುಮಾರಸ್ವಾಮಿ (80) ಮೃತ ದುರ್ದೈವಿ.
ಇಂದು ಬೆಳಿಗ್ಗೆ ರಕ್ತ ಪರೀಕ್ಷೆ ಮಾಡಿಸಿಕೊಂಡು ಮನೆಗೆ ಬಂದಿದ್ದ ಕುಮಾರಸ್ವಾಮಿ ಅವರು, ಬೆಳಿಗ್ಗೆ ಸುಮಾರು 7:30ರ ವೇಳೆಗೆ ದತ್ತಾತ್ರೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಬರುವುದಾಗಿ ತಿಳಿಸಿ ಹೊರಟಿದ್ದರು. ಆದರೆ, ಬೆಳಿಗ್ಗೆ ಸುಮಾರು 9:00 ಗಂಟೆಯ ವೇಳೆಗೆ ಸಂತೋಷ್ ಕುಮಾರ್ ಎಂಬುವವರು ವೃದ್ಧರ ಮನೆಗೆ ಬಂದು, ಕುಮಾರಸ್ವಾಮಿ ಅವರು ದೇವಸ್ಥಾನದ ಲಿಫ್ಟ್ ಬಾಗಿಲ ಹತ್ತಿರ ಸಿಲುಕಿಕೊಂಡು ಅಸ್ವಸ್ಥಗೊಂಡಿರುವುದಾಗಿ ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಲಿಫ್ಟ್‌ನಲ್ಲಿ ಸಿಲುಕಿದ್ದ ಕುಮಾರಸ್ವಾಮಿ ಅವರನ್ನು ಹೊರತೆಗೆದು, ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ, ಪರೀಕ್ಷಿಸಿದ ವೈದ್ಯರು ಕುಮಾರಸ್ವಾಮಿ ಅವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಕುಮಾರಸ್ವಾಮಿ ಅವರು ದೇವಸ್ಥಾನದ ಲಿಫ್ಟ್‌ನಲ್ಲಿ ಮೇಲೆ ಹೋಗಲು ಬಟನ್ ಒತ್ತಿ, ಹೊರಗಿನ ಬಾಗಿಲು ತೆಗೆದು ಒಳಹೋದಾಗ, ಮೇಲಿದ್ದ ಲಿಫ್ಟ್ ಕೆಳಗೆ ಬಂದಿದ್ದರಿಂದ ಅವರು ಲಿಫ್ಟ್‌ನ ಅಡಿ ಸಿಲುಕಿಕೊಂಡು ಆಕಸ್ಮಿಕವಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಮೃತರ ಪತ್ನಿ ಲಲಿತಾ ಕುಮಾರಸ್ವಾಮಿ (75) ಅವರು ನೀಡಿದ ದೂರಿನ ಮೇರೆಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ಪ್ರಕರಣ ದಾಖಲಾಗಿದೆ.
PublicNext
02/08/2026 07:39 pm
LOADING...