ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಗರಿಬೊಮ್ಮನಹಳ್ಳಿಯಲ್ಲಿ ಲಾಕಪ್ ಡೆತ್ !

ಹಗರಿಬೊಮ್ಮನಹಳ್ಳಿ: ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್...ಠಾಣೆಯ ಮುಂದೆ ಜಮಾಯಿಸಿದ ಜನರು...ಪೊಲೀಸರ ವಿರುದ್ದ ಸಂಬಂಧಿಕರ ಆಕ್ರೋಶ... ಆಸ್ಪತ್ರೆಯಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಸಂಬಂಧಿಕರು, ಗ್ರಾಮಸ್ಥರು..

ಹೌದು!

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದಿರುವ ಲಾಕಪ್ ಡೆತ್ ಪ್ರಕರಣ ಭಾರಿ ಸಂಚಲನ ಮೂಡಿಸಿದೆ. ಮೃತಪಟ್ಟ ವ್ಯಕ್ತಿಯನ್ನು ಹರಪನಹಳ್ಳಿ ಮೂಲದ 38 ವರ್ಷದ ಖಲೀಲ್ ಎಂದು ಗುರುತಿಸಲಾಗಿದೆ.

ಕಟ್ಟಡ ಕಾರ್ಮಿಕನಾಗಿದ್ದ ಖಲೀಲ್, ಕುಟುಂಬದೊಂದಿಗೆ ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ವಾಸವಾಗಿದ್ದ. ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದ. ಪತ್ನಿ ನೀಡಿದ ದೂರಿನ ಮೇರೆಗೆ ನಿನ್ನೆ ರಾತ್ರಿ ಪೊಲೀಸರು ಅವರನ್ನು ವಿಚಾರಣೆಗಾಗಿ ಠಾಣೆಗೆ ಕರೆತಂದಿದ್ದರು. ವಿಚಾರಣೆ ಮಾಡೋದು ಬಿಟ್ಟು ಲಾಠಿಯಿಂದ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದರಿಂದಾಗಿ ಖಲೀಲ್ ಠಾಣೆಯಲ್ಲೇ ಸಾವನ್ನಪ್ಪಿದ್ದಾರೆ. ಆದ್ರೆ ಪೊಲೀಸರು ಫಿಟ್ಸ್ ನಿಂದ ಸಾವನ್ನಪ್ಪಿದ್ದಾನೆ ಅಂತಾ ಕಥೆ ಕಟ್ಟಲು ನೋಡಿದ್ದಾರೆ.

ಆದ್ರೆ ತಲೆಯಿಂದ ರಕ್ತ ಸೋರುತ್ತಿರುವುದು ಹಾಗೂ ಮೈಮೇಲಿನ ಗಾಯಗಳಿಂದಾಗಿ ಪೊಲೀಸರ ಏಟಿನಿಂದಲೇ ಮೃತಪಟ್ಟಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಸ್ಥಳೀಯ ಶಾಸಕ ನೇಮಿರಾಜ್ ನಾಯ್ಕ ಕೂಡ ಆಸ್ಪತ್ರೆಗೆ ಭೇಟಿ ನೀಡಿ ಮೃತನ ಕುಟುಂಬಸ್ಥರೊಂದಿಗೆ ಘಟನೆಯ ಮಾಹಿತಿ ಪಡೆದು, ಎಸ್ ಪಿ ಅವರನ್ನು ಭೇಟಿ ಮಾಡಿ ಪಾರದರ್ಶಕವಾಗಿ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ತಕ್ಕ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಇತ್ತ ಮೃತನ ಪತ್ನಿ ನೀಡಿದ ದೂರಿನ ಮೇರೆಗೆ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೇಲಿಯೇ ಎದ್ದು ಹೊಲ ಮೇಯ್ದರೆ ಯಾರನ್ನು ಕೇಳಬೇಕು ಅಂತ ಆಕ್ರೋಶ ಹೊರಹಾಕಿದ್ರು.

ಪೊಲೀಸರ ಏಟಿನಿಂದ ಖಲೀಲ್ ಠಾಣೆಯಲ್ಲಿ ಮೃತಪಟ್ಟಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಠಾಣೆ ಹಾಗೂ ಸರ್ಕಾರಿ ಆಸ್ಪತ್ರೆ ಬಳಿ ನೂರಾರು ಜನರು ಜಮಾಯಿಸಿ ಪೊಲೀಸರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ರು. ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಯ್ತು. ಖುದ್ದು ಎಸ್ಪಿ ಜಾಹ್ನವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕುಟುಂಬಸ್ಥರಿಗೆ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.

ನ್ಯಾಯಾಧೀಶರು, ತಹಶೀಲ್ದಾರ್ ಸಮ್ಮುಖದಲ್ಲಿ ಪಂಚನಾಮೆ ಮಾಡಲಾಗಿದ್ದು,

ಸಾವನ್ನಪ್ಪಿದ ಖಲೀಲ್ ಮೃತದೇಹದ ಮರಣೋತ್ತರ ಪರೀಕ್ಷೆಗಾಗಿ ಕೊಪ್ಪಳ ಕಿಮ್ಸ್ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ. ಇನ್ನು ಲಾಕಪ್ ಡೆತ್ ಕೇಸ್ ವಿಚಾರದಲ್ಲಿ ಒಬ್ಬ ಎಎಸ್ ಐ ರಾಘವೇಂದ್ರ, ಪೊಲೀಸ್ ಪೇದೆ ವೆಂಕಟೇಶ್ ಇಬ್ಬರ ಮೇಲೂ FIR ದಾಖಲಾಗಿದೆ.

ಲಾಕಪ್ ಡೆತ್ ಪ್ರಕರಣದ ಬಗ್ಗೆ ಕುಟುಂಬಸ್ಥರು ಹಾಗೂ ಸ್ಥಳೀಯರು ಹಗರಿಬೊಮ್ಮನಹಳ್ಳಿ ಠಾಣೆ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾನೂನು ರೀತಿಯಲ್ಲಿ ಕ್ರಮ ಕೈಗೊಂಡು ಜೈಲಿಗೆ ಕಳುಹಿಸಬಹುದಿತ್ತು. ಆದ್ರೆ ತಾವೇ ಕಾನೂನು ಕೈಗೆ ತೆಗೆದುಕೊಂಡು ಓರ್ವ ವ್ಯಕ್ತಿಯ ಸಾವಿಗೆ ಕಾರಣವಾಗಿದ್ದಾರೆ.

ಮೇಲ್ನೋಟಕ್ಕೆ ಪೊಲೀಸರ ಏಟಿನಿಂದಲೇ ಸಾವನ್ನಪ್ಪಿರುವುದು ಗೊತ್ತಾಗುತ್ತದೆ. ಆದ್ರೆ ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ನಿಖರ ಮಾಹಿತಿ ತಿಳಿಯಲಿದೆ.

-ಪಾಂಡುರಂಗ ಜಂತ್ಲಿ, ಪಬ್ಲಿಕ್ ನೆಕ್ಸ್ಟ್, ವಿಜಯನಗರ

Edited By : Somashekar
PublicNext

PublicNext

02/08/2026 08:11 pm

Cinque Terre

12.28 K

Cinque Terre

0

ಸಂಬಂಧಿತ ಸುದ್ದಿ