ಪೇಶಾವರ್: ಹಿಂಸಾಚಾರಕ್ಕೆ ಕಡಿವಾಣ ಹಾಕಿ ಶಾಂತಿ ನೆಲೆಸುವಂತೆ ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನಾ ರ‍್ಯಾಲಿಯನ್ನೇ ಗುರಿಯಾಗಿಸಿಕೊಂಡು ಉಗ್ರರು ಭೀಕರ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ ಘಟನೆ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಭಾನುವಾರ ನಡೆದಿದೆ. ಈ ರಕ್ತಸಿಕ್ತ ಸ್ಫೋಟದಲ್ಲಿ ಕನಿಷ್ಠ 13 ಜನರು ಮೃತಪಟ್ಟಿದ್ದು, 22ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಹೌದು ಖೈಬರ್ ಪಖ್ತುಂಖ್ವಾದ ಸ್ವಾತ್ ಜಿಲ್ಲೆಯ ಕಬಲ್ ಪಟ್ಟಣದಲ್ಲಿ 'ಸ್ವಾತ್ ಅಮನ್ ಜಿರ್ಗಾ' (ಸ್ಥಳೀಯ ಬುಡಕಟ್ಟು ಮಂಡಳಿ) ನೇತೃತ್ವದಲ್ಲಿ 'ಸ್ವಾತ್ ಶಾಂತಿ ರ‍್ಯಾಲಿ' ಆಯೋಜಿಸಲಾಗಿತ್ತು. ಕಳೆದ ಕೆಲವು ತಿಂಗಳುಗಳಿಂದ ಪ್ರದೇಶದಲ್ಲಿ ಬಿಗಡಾಯಿಸಿರುವ ಭದ್ರತಾ ಸ್ಥಿತಿಗತಿಯನ್ನು ಖಂಡಿಸಿ, ಭಯೋತ್ಪಾದನೆ ವಿರುದ್ಧ ಸಾರ್ವಜನಿಕರು ಬ್ಯಾನರ್, ಫಲಕಗಳನ್ನು ಹಿಡಿದು ಶಾಂತಿಯುತ ಪ್ರತಿಭಟನಾ ಜಾಥಾ ನಡೆಸುತ್ತಿದ್ದರು.
ರ‍್ಯಾಲಿ ಮುಕ್ತಾಯಗೊಳ್ಳುವ ಹಂತದಲ್ಲಿದ್ದಾಗ ಪೊಲೀಸ್ ಠಾಣೆಯ ಗೇಟ್ ಸಮೀಪ ಬಂದ ಆತ್ಮಾಹುತಿ ಬಾಂಬರ್ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದಾನೆ. ಸ್ಫೋಟದ ರಭಸಕ್ಕೆ ಸ್ಥಳದಲ್ಲೇ ಹಲವರು ಉಸಿರುಚೆಲ್ಲಿದ್ದು, ಗಾಯಗೊಂಡವರ ಆಕ್ರಂದನ ಮುಗಿಲುಮುಟ್ಟಿತ್ತು.
ಇನ್ನೂ ಘಟನೆ ನಡೆದ ತಕ್ಷಣವೇ ಭದ್ರತಾ ಪಡೆಗಳು ಮತ್ತು ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರದೇಶವನ್ನು ಸಂಪೂರ್ಣವಾಗಿ ಸುತ್ತುವರಿದಿರುವ ಪೊಲೀಸರು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಘಟನೆಯ ಹೊಣೆಯನ್ನು ತಕ್ಷಣಕ್ಕೆ ಯಾವ ಉಗ್ರ ಸಂಘಟನೆಯೂ ವಹಿಸಿಕೊಂಡಿಲ್ಲ.
PublicNext
03/08/2026 07:32 am
LOADING...