ಕ್ಯಾಲಿಫೋರ್ನಿಯಾ: ಸಮುದ್ರದ ದೈತ್ಯ ಅಲೆಗಳ ಅಬ್ಬರಕ್ಕೆ ಸಿಲುಕಿ, ಸಾವಿನ ದವಡೆಯಲ್ಲಿದ್ದ 10 ವರ್ಷದ ಬಾಲಕನೊಬ್ಬನನ್ನು 16 ವರ್ಷದ ಯುವ ಲೈಫ್‌ಗಾರ್ಡ್ ಅತ್ಯಂತ ಸಾಹಸಮಯವಾಗಿ ರಕ್ಷಿಸಿರುವ ಘಟನೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಪ್ರಾಣದ ಹಂಗು ತೊರೆದು ಆತ ನಡೆಸಿದ ಈ ರಕ್ಷಣಾ ಕಾರ್ಯಾಚರಣೆಯ ರೋಮಾಂಚನಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಯುವಕನ ಧೈರ್ಯಕ್ಕೆ ಸಾರ್ವಜನಿಕರು ಶಹಬ್ಬಾಸ್ ಎನ್ನುತ್ತಿದ್ದಾರೆ.
ಹೌದು ಕ್ಯಾಲಿಫೋರ್ನಿಯಾದ ಸೀಬ್ರೈಟ್ ಬೀಚ್‌ನಲ್ಲಿ ನೀರಾಟವಾಡುತ್ತಿದ್ದ 10 ವರ್ಷದ ಬಾಲಕನೊಬ್ಬ ದಿಢೀರನೆ ಬಲಿಷ್ಠವಾಗಿ ಬಂದ ರಾಕ್ಷಸ ಅಲೆಗಳ ಹೊಡೆತಕ್ಕೆ ಸಿಲುಕಿ ಸಮುದ್ರದ ಆಳಕ್ಕೆ ಕೊಚ್ಚಿಹೋಗಿದ್ದಾನೆ. ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಕನನ್ನು ಕಂಡ ತಕ್ಷಣವೇ ಕರ್ತವ್ಯದಲ್ಲಿದ್ದ 16 ವರ್ಷದ ಯುವ ಲೈಫ್‌ಗಾರ್ಡ್ ಕ್ಷಣ ಮಾತ್ರವೂ ತಡಮಾಡದೆ ನೀರಿಗೆ ಹಾರಿದ್ದಾನೆ. ಸಮುದ್ರದಲ್ಲಿ ಅಲೆಗಳು ಒಂದಾದ ಮೇಲೊಂದರಂತೆ ರಭಸವಾಗಿ ಅಪ್ಪಳಿಸುತ್ತಿದ್ದರೂ, ಯುವಕ ಬಾಲಕನನ್ನು ಗಟ್ಟಿಯಾಗಿ ಹಿಡಿದುಕೊಂಡು ದಡದತ್ತ ತರಲು ನಿರಂತರವಾಗಿ ಹೋರಾಡಿದ್ದಾನೆ. ಪ್ರತಿಯೊಂದು ದೊಡ್ಡ ಅಲೆ ಬಂದಾಗಲೂ ಜಾಣ್ಮೆಯಿಂದ ಉಸಿರು ಬಿಗಿಹಿಡಿದು ನೀರೊಳಗೆ ಮುಳುಗುತ್ತಾ, ಬಾಲಕನನ್ನು ಬಿಡದೆ ಮೇಲಕ್ಕೆತ್ತಿ ದಂಡೆಗೆ ಸುರಕ್ಷಿತವಾಗಿ ಕರೆತಂದಿದ್ದಾನೆ.
ಬೀಚ್‌ನಲ್ಲಿದ್ದ ಇತರರು ಹಾಗೂ ಸಹ ಲೈಫ್‌ಗಾರ್ಡ್‌ಗಳು ತಕ್ಷಣ ನೆರವಿಗೆ ಬಂದಿದ್ದು, ಬಾಲಕನನ್ನು ದಂಡೆಗೆ ತಂದಿದ್ದಾರೆ. ಪ್ರಾಥಮಿಕ ಚಿಕಿತ್ಸೆಯ ನಂತರ ಬಾಲಕನನ್ನು ಸುರಕ್ಷಿತವಾಗಿ ಆತನ ಪೋಷಕರಿಗೆ ಹಸ್ತಾಂತರಿಸಲಾಗಿದೆ. ಸದ್ಯ ಈ ಸಾಹಸದ ರೋಮಾಂಚನಕಾರಿ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದು, "ನಿಜವಾದ ಹೀರೋ" ಎಂದು ನೆಟ್ಟಿಗರು ಈ ಯುವ ಲೈಫ್‌ಗಾರ್ಡ್‌ನ ಧೈರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.
PublicNext
28/07/2026 08:06 am
LOADING...