ಬೆಳಗಾವಿ: ರಾಜ್ಯದ ಎರಡನೇ ರಾಜಧಾನಿ ಬೆಳಗಾವಿ ನಗರದಲ್ಲಿರುವ ಜಿಲ್ಲಾ ಆಸ್ಪತ್ರೆಯ ತೀವ್ರ ನಿಗಾ ಘಟಕದ ಹೊಸ ಕಟ್ಟಡದ ಕಾಮಗಾರಿ ಮುಗಿದಿದ್ದು, ಹೊಸ ತೀವ್ರ ನಿಗಾ ಘಟಕ ಆರಂಭವಾಗದೆ ಹಳೆಯ ಕಟ್ಟಡದಲ್ಲೇ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಹೌದು.. ರಾಜ್ಯದ ಅತೀ ದೊಡ್ಡ ಜಿಲ್ಲೆ ಬೆಳಗಾವಿ. ಬೆಳಗಾವಿ ಜಿಲ್ಲೆಯು ಗೋವಾ, ಮಹಾರಾಷ್ಟ್ರ ಗಡಿಯನ್ನು ಹೊಂದಿದ್ದು, ಗಡಿ ಭಾಗದ ಬಹುತೇಕ ಗ್ರಾಮಗಳು ಬೆಳಗಾವಿ ನಗರದ ಮೇಲೆ ಅವಲಂಬಿತವಾಗಿವೆ. ಹಾಗಾಗಿ ಪ್ರತಿನಿತ್ಯ ನೂರಾರು ರೋಗಿಗಳು ತುರ್ತು ಚಿಕಿತ್ಸೆಗಾಗಿ ಬಿಮ್ಸ್ (BIMS) ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಳ್ಳುತ್ತಾರೆ. ಸದ್ಯ ಬಿಮ್ಸ್ ಆವರಣದಲ್ಲಿ 150 ವರ್ಷಗಳಷ್ಟು ಹಳೆಯ ಕಟ್ಟಡದಲ್ಲಿ ತೀವ್ರ ನಿಗಾ ಘಟಕ ನಡೆಸಲಾಗುತ್ತಿದೆ. ಈ ಕಟ್ಟಡದಲ್ಲಿ ವೈದ್ಯರಿಗೆ, ರೋಗಿಗಳಿಗೆ ಹತ್ತಾರು ಸಮಸ್ಯೆಗಳಿದ್ದು, ಅದಕ್ಕೆ ಪರಿಹಾರವೇ ಇಲ್ಲದಂತಾಗಿದೆ.
ಆದರೆ ಇದೇ ಬಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಹತ್ತಾರು ಕೋಟಿ ಖರ್ಚು ಮಾಡಿ ಎರಡು ಅಂತಸ್ತಿನ ಹೈಟೆಕ್ ತೀವ್ರ ನಿಗಾ ಘಟಕದ ಕಟ್ಟಡ ನಿರ್ಮಾಣ ಮಾಡಲಾಗಿದೆ. ಈ ಹೊಸ ಕಟ್ಟಡದಲ್ಲಿ ಮಾಡ್ಯುಲರ್ ಓಟಿ, ನಾರ್ಮಲ್ ಓಟಿ, ಪ್ರತಿ ವಾರ್ಡ್‌ನಲ್ಲಿ ಸೆಂಟ್ರಲೈಸ್ಡ್ ಎಸಿ ವ್ಯವಸ್ಥೆ ಇದೆ. ವೈದ್ಯರಿಗೆ ಪ್ರತ್ಯೇಕ ಕೊಠಡಿ, ಲಿಫ್ಟ್ ವ್ಯವಸ್ಥೆ ಹಾಗೂ ಜೊತೆಗೆ 50ಕ್ಕೂ ಅಧಿಕ ಬೆಡ್‌ಗಳನ್ನು ಹೊಂದಿರುವ ಹೈಟೆಕ್ ಕಟ್ಟಡ ಇದಾಗಿದೆ.
ಈಗಿರುವ ಹಳೆಯ ಕಟ್ಟಡದಲ್ಲಿ ಸಿಟಿ ಸ್ಕ್ಯಾನ್ ಹಾಗೂ ಎಂಆರ್‌ಐ ಬಿಟ್ಟು ಸಂಪೂರ್ಣ ತೀವ್ರ ನಿಗಾ ಘಟಕವೇ ಹೊಸ ಕಟ್ಟಡಕ್ಕೆ ಶಿಫ್ಟ್ ಆಗಬೇಕಿದೆ. ಒಂದು ತಿಂಗಳ ಹಿಂದೆಯೇ ಹೊಸ ಕಟ್ಟಡದ ಕಾಮಗಾರಿಯನ್ನು ಗುತ್ತಿಗೆದಾರರು ಮುಗಿಸಿ ಬಿಮ್ಸ್‌ಗೆ ಹಸ್ತಾಂತರಿಸಿದ್ದಾರೆ ಎನ್ನಲಾಗಿದ್ದು, ಆದರೆ ಇದುವರೆಗೆ ಯಾಕೆ ಹೊಸ ಕಟ್ಟಡದಲ್ಲಿ ತೀವ್ರ ನಿಗಾ ಘಟಕ ಆರಂಭವಾಗಿಲ್ಲ ಎಂಬ ಪ್ರಶ್ನೆಗಳನ್ನು ಜನರು ಕೇಳುತ್ತಿದ್ದಾರೆ. ಹಾಗಾಗಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸದೆ ಆದಷ್ಟು ಬೇಗ ಹೊಸ ತೀವ್ರ ನಿಗಾ ಘಟಕ ಆರಂಭಿಸಬೇಕಿದೆ.
ಪ್ರಲ್ಹಾದ ಪೂಜಾರಿ, ಪಬ್ಲಿಕ್ ನೆಕ್ಸ್ಟ್, ಬೆಳಗಾವಿ
PublicNext
03/08/2026 02:01 pm
LOADING...