ಬೆಳಗಾವಿ: "ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸರ್ವಪಕ್ಷ ಸಭೆ ಕರೆದಾಗ, ವಿಪಕ್ಷಗಳ ನಾಯಕರಿಗೆ ಮ್ಯಾಜಿಕ್ ಮಾಡಿ ಅವರ ತಲೆಗೆ ಟೋಪಿ ಹಾಕಿದ್ದಾರೆ. ಅದೇ ರೀತಿ ನಮಗೂ ಟೋಪಿ ಹಾಕಲು ಯತ್ನಿಸುತ್ತಿದ್ದಾರೆ. ಆದರೆ ಇದಕ್ಕೆ ನಾವು ತಯಾರಿಲ್ಲ. ಆಗಸ್ಟ್ 13ರಂದು 'ಅಖಂಡ ಕರ್ನಾಟಕ ಬಂದ್' ಮಾಡಿಯೇ ತೀರುತ್ತೇವೆ" ಎಂದು ಹಿರಿಯ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, "ಸರ್ವಪಕ್ಷ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅತ್ಯಂತ ಬುದ್ಧಿವಂತಿಕೆಯಿಂದ ಮ್ಯಾಜಿಕ್ ಮಾಡಿದರು. 'ಮಳೆ ಬಂತು, ನೀರು ಹರಿತು' ಎಂದ ತಕ್ಷಣವೇ ನಾಯಕರು ಒಬ್ಬರಿಗೊಬ್ಬರು ತಬ್ಬಿಕೊಂಡರು. ಇಷ್ಟೊಂದು ಬೇಗ ಮ್ಯಾಜಿಕ್ ಮಾಡಿದ ಇವರೊಬ್ಬರು 'ಮ್ಯಾಜಿಕ್ ನಾಯಕ'!" ಎಂದು ಲೇವಡಿ ಮಾಡಿದರು.
"ಕಬಿನಿ ಜಲಾಶಯದಿಂದ ನೀರು ಬಿಡಲಾಗುತ್ತಿದ್ದು, ಇದರಲ್ಲಿ ಯಾವುದೇ ವಿವಾದವಿಲ್ಲ. ವಿವಾದವಿರುವುದು ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ. ನಮಗೆ ಸರ್ಕಾರದ ಮಾತಿನಲ್ಲಿ ನಂಬಿಕೆಯಿಲ್ಲ. ತಮಿಳುನಾಡಿನಲ್ಲಿ ಎಐಎಡಿಎಮ್‌ಕೆ, ಡಿಎಮ್‌ಕೆ ಹಾಗೂ ಅಲ್ಲಿನ ರೈತರು ತಮಗೆ ಅನ್ಯಾಯವಾಗಿದೆ ಎಂದು ತೀವ್ರ ಹೋರಾಟ ಮಾಡುತ್ತಿದ್ದಾರೆ. ಇಲ್ಲಿ ನಮಗೇ ಕುಡಿಯಲು ನೀರಿಲ್ಲ, ಹಾಗಿರುವಾಗ ತಮಿಳುನಾಡಿಗೆ ನೀರು ಬಿಡುವ ಪ್ರಶ್ನೆಯೇ ಇಲ್ಲ" ಎಂದು ವಾಟಾಳ್ ನಾಗರಾಜ್ ಗುಡುಗಿದರು.
"ಇದೇ ಮೇಕೆದಾಟು ಯೋಜನೆಗೆ ಆಗ್ರಹಿಸಿ ಹಿಂದೆ ಪಾದಯಾತ್ರೆ ಮಾಡಿದ್ದು ಡಿ.ಕೆ. ಶಿವಕುಮಾರ್ ಅವರಲ್ಲವೇ? ಯೋಜನೆಯ ಕಾಮಗಾರಿ ಆರಂಭಿಸಲು ಯಾವುದೇ ತಡೆಯಿಲ್ಲ ಎಂದು ಸಂಸತ್ತಿನಲ್ಲಿ ಹೇಳಿದ್ದರೂ, ಯೋಜನೆ ಜಾರಿಗೆ ಸರ್ಕಾರ ಏನು ಮಾಡುತ್ತಿದೆ?" ಎಂದು ಅವರು ಪ್ರಶ್ನಿಸಿದರು.
ಇದೇ ವೇಳೆ ರಾಜಕಾರಣಿಗಳ ವಿರುದ್ಧ ಕಿಡಿಕಾರಿದ ಅವರು, "ಯಾವುದೇ ಪಕ್ಷದ ರಾಜಕಾರಣಿಗಳಿಗೂ ಬೆಳಗಾವಿ ಹಾಗೂ ಗಡಿನಾಡಿನ ಸಮಸ್ಯೆಗಳು ಬೇಕಾಗಿಲ್ಲ. ಬೆಳಗಾವಿಯಲ್ಲಿ ಇಂದಿಗೂ ಕನ್ನಡ ಉಳಿದಿದ್ದರೆ ಅದು ಕನ್ನಡಪರ ಸಂಘಟನೆಗಳಿಂದ ಮಾತ್ರ. ಗಡಿ ವಿಚಾರದಲ್ಲಿ ಯಾವೊಬ್ಬ ಶಾಸಕ, ಸಂಸದ ಅಥವಾ ಎಂಎಲ್‌ಸಿ ಬೀದಿಗಿಳಿದು ಹೋರಾಡಲಿಲ್ಲ, ಧ್ವನಿ ಎತ್ತಲಿಲ್ಲ. ಬೆಳಗಾವಿಯಲ್ಲಿ ಕಾಟಾಚಾರಕ್ಕೆ ವರ್ಷಕ್ಕೊಮ್ಮೆ ಅಧಿವೇಶನ ನಡೆಸಿ ಕಥೆ ಹೇಳಿ ಹೋಗುತ್ತಾರೆ. ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಬಗ್ಗೆ ಸರ್ಕಾರ ಏನು ಮಾಡಿದೆ ಎಂಬ ಬಗ್ಗೆ ತಕ್ಷಣವೇ ಶ್ವೇತಪತ್ರ ಬಿಡುಗಡೆ ಮಾಡಲಿ" ಎಂದು ಸವಾಲು ಹಾಕಿದರು.
PublicNext
05/08/2026 04:51 pm