ಬೈಲಹೊಂಗಲ: ರಾಜ್ಯದಲ್ಲಿ ಅನೇಕ ತಾಲೂಕುಗಳು ಬರಗಾಲದಲ್ಲಿವೆ ಎಂಬ ಉಪಮುಖ್ಯಮಂತ್ರಿಗಳ ಹೇಳಿಕೆಯಲ್ಲಿ ಹಾಗೂ ರಾಜ್ಯದ ಮಳೆ ಆಧಾರಿತ ತಾಲೂಕುಗಳಲ್ಲಿ ಕಡಿಮೆ ಮಳೆಯ ಕೊರತೆಯ ಪಟ್ಟಿಯಲ್ಲಿ ಬೈಲಹೊಂಗಲವನ್ನು ಇಟ್ಟಿರುವುದು ಸರಿಯಲ್ಲ. ಇದನ್ನು ಬರಗಾಲ ಪ್ರದೇಶದ ಪಟ್ಟಿಗೆ ಸೇರಿಸಬೇಕೆಂದು ರಾಜ್ಯ ಭಾರತೀಯ ಕೃಷಿಕ ಸಮಾಜದ ರಾಜ್ಯಾಧ್ಯಕ್ಷ ಮಹಾಂತೇಶ ಕಮತ ಆಗ್ರಹಿಸಿದ್ದಾರೆ.
ಉಪವಿಭಾಗಾಧಿಕಾರಿಗಳ ಮೂಲಕ ಮುಖ್ಯಮಂತ್ರಿಯವರಿಗೆ ಬುಧವಾರ ಮನವಿ ಅರ್ಪಿಸಿ ಮಾತನಾಡಿದ ಅವರು, "ಅನೇಕ ಹಳ್ಳಿಗಳಲ್ಲಿ ಬಿತ್ತನೆಯೇ ಆಗಿಲ್ಲ. ಬಿತ್ತನೆ ಮಾಡಿದ ಅಲ್ಪಸ್ವಲ್ಪ ಬೆಳೆಗಳು ಮಳೆಯಿಲ್ಲದೆ ಕಮರಿ ಹೋಗಿವೆ. ಆದ್ದರಿಂದ ರಾಜ್ಯ ಸರ್ಕಾರ ಆಗಸ್ಟ್ 15ರವರೆಗೆ ಮಳೆಯ ಕೊರತೆಯನ್ನು ನೋಡಿಕೊಂಡು ಬರಗಾಲ ಪ್ರದೇಶ ಎಂದು ಘೋಷಿಸಲು ನಿರ್ಧರಿಸಿದೆ. ಸರ್ಕಾರ ಬರಗಾಲ ಘೋಷಣೆ ಮಾಡುವಾಗ ಬೈಲಹೊಂಗಲ ತಾಲೂಕನ್ನು ಬರಪೀಡಿತ ಎಂದು ಘೋಷಿಸಬೇಕು. ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ಹಾಗೂ ಬರಗಾಲಕ್ಕೆ ತುತ್ತಾದ ರೈತರ ಖಾತೆಗೆ ತಕ್ಷಣವೇ ಸರ್ಕಾರ ಪರಿಹಾರ ನೀಡಬೇಕು. ರೈತರ ಸಂಪೂರ್ಣ ಸಾಲ ಮನ್ನಾ ಮಾಡಿ, ಬ್ಯಾಂಕ್‌ಗಳಿಂದ ರೈತರಿಗೆ ಸಾಲದ ನೋಟಿಸ್ ಬರದಂತೆ ಕ್ರಮ ವಹಿಸಬೇಕು" ಎಂದರು.
ಭಾರತೀಯ ಕೃಷಿಕ ಸಮಾಜದ ನವದೆಹಲಿ ರಾಜ್ಯ ಸಂಚಾಲಕ ಎಫ್.ಎಸ್. ಸಿದ್ಧನಗೌಡರ ಮಾತನಾಡಿ, "ಉಪವಿಭಾಗದಲ್ಲಿ ಬರುವ ರಾಜ್ಯ, ಜಿಲ್ಲಾ ಮತ್ತು ತಾಲೂಕು ಹೆದ್ದಾರಿ, ಗ್ರಾಮೀಣ ಮುಖ್ಯರಸ್ತೆಗಳು ಹಾಗೂ ರೈತರು ಜಮೀನಿಗೆ ತೆರಳುವ ರಸ್ತೆಗಳನ್ನು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಅತಿಕ್ರಮಣ ಮಾಡುತ್ತಿದ್ದು, ಸುಗಮ ಸಂಚಾರಕ್ಕೆ ಅಪಾಯವಾಗಿ ಪರಿಣಮಿಸಿದೆ. ಸಾಮಾಜಿಕ ಅರಣ್ಯ ಇಲಾಖೆಯಿಂದ ನೆಟ್ಟಿರುವ ಗಿಡಗಳನ್ನು ಅಗೆದು, ಡಾಂಬರೀಕರಣ ರಸ್ತೆಯವರೆಗೆ ಅತಿಕ್ರಮಣ ಮಾಡಿ ಬೆಳೆದ ಗಿಡಗಳನ್ನು ನಾಶ ಮಾಡುತ್ತಿದ್ದರೂ ಅರಣ್ಯ ಇಲಾಖೆ ಗಾಢನಿದ್ರೆಯಲ್ಲಿದೆ. ರೈತರಿಗೆ ಅನುಕೂಲವಾಗಲು ಕೇಂದ್ರ ಸರ್ಕಾರದ ಗ್ರಾಮ ಸಡಕ್ ಯೋಜನೆಯಡಿ ನಿರ್ಮಾಣಗೊಂಡಿರುವ ರಸ್ತೆಗಳ ಪಕ್ಕದಲ್ಲಿ ಅಗೆದು ಪ್ರಯಾಣಿಕರಿಗೆ ಅಪಾಯವನ್ನುಂಟು ಮಾಡುತ್ತಿದ್ದಾರೆ. ಈ ವಿಷಯವನ್ನು ಗಮನಿಸದ ಲೋಕೋಪಯೋಗಿ ಇಲಾಖೆ ಹಾಗೂ ಸಾಮಾಜಿಕ ಅರಣ್ಯ ಇಲಾಖೆಗೆ ಚಾಟಿ ಬೀಸಬೇಕಾಗಿದೆ. ಸರ್ಕಾರ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ರಸ್ತೆಗಳು ಮತ್ತು ಅರಣ್ಯ ಸಂಪತ್ತನ್ನು ಉಳಿಸುವಲ್ಲಿ ಈ ಇಲಾಖೆಗಳು ಸಂಪೂರ್ಣವಾಗಿ ವಿಫಲವಾಗಿವೆ. ಆದ್ದರಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ರಸ್ತೆಗಳ ಹದ್ದುಬಸ್ತು ಗುರುತಿಸಲು ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶಂಕರ ಕುದುರಿ, ಮಡಿವಾಳಪ್ಪ ಪೇಂಟೇದ, ಬಸವರಾಜ ಹೋಂಡದ, ಬಸವರಾಜ್ ಬೆಳವಡಿ, ಸಂತೋಷ ರೇಣಕೆ, ಮಂಜು ಪತ್ತಾರ್, ಜ್ಞಾನೇಶ್ವರ್ ಮಡಿವಾಳ, ಮುಗಬಸಪ್ಪ ಬನವಣ್ಣವರ, ಸಂಗಪ್ಪ ಬಸಟ್ಟಿ, ವಿಠ್ಠಲ್ ಬೆಣ್ಣಿ, ಮಲ್ಲಿಕಾರ್ಜುನ್ ಜಳ್ಳಿ, ಬಸವರಾಜ್ ಕುದುರಿ, ನಾಗಯ್ಯ ಪೂಜಾರ, ಮೂಗಬಸಪ್ಪ ಮಗನೂರ, ರಾಜು ಸಿಂಗಾರಗೊಪ್ಪ, ಪರಶು ಬೆಣ್ಣಿ, ಗೂಳಪ್ಪ ಹೊಳಿ, ಮಡಿವಾಳಪ್ಪ ಚಿಕ್ಕೊಪ್ಪ ಸೇರಿದಂತೆ ಅನೇಕ ರೈತ ಪ್ರತಿನಿಧಿಗಳು ಉಪಸ್ಥಿತರಿದ್ದರು.
Kshetra Samachara
05/08/2026 09:58 pm