ಬೆಳಗಾವಿ: ಸ್ವಚ್ಛತೆ, ಕುಡಿಯುವ ನೀರು ಹಾಗೂ ರಸ್ತೆಗೆ ಸಂಬಂಧಿಸಿದ ಸಮಸ್ಯೆಗಳಿರುವ ನಗರದ ಕೆಲವು ಬಡಾವಣೆಗಳಿಗೆ ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಅವರು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸುಭಾಷ್ ನಗರ, ಅಶೋಕ್ ನಗರ ಸೇರಿದಂತೆ ನಗರದ ವಿವಿಧೆಡೆ ಭೇಟಿ ನೀಡಿದ ಆಯುಕ್ತರು, ಕೆಯುಐಡಿಎಫ್‌ಸಿ (KUIDFC) ನೀರು ಸರಬರಾಜು ಯೋಜನೆಗೆ ಸಂಬಂಧಿಸಿದ ಕಾಮಗಾರಿಗಳನ್ನು ಪರಿಶೀಲಿಸಿದರು. ಕೆಲವು ಕಡೆ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಚರಂಡಿ ನೀರು ಸೇರುತ್ತಿರುವ ಬಗ್ಗೆ ಮಾಹಿತಿ ಪಡೆದು, ಅದನ್ನು ತಕ್ಷಣವೇ ಸರಿಪಡಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ, ಎಲ್ ಆಂಡ್ ಟಿ (L&T) ಕಂಪನಿಯವರು ನೀರು ಸರಬರಾಜಿಗಾಗಿ ಪೈಪ್‌ಲೈನ್ ಅಳವಡಿಸಲು ತೋಡಿದ ಗುಂಡಿಗಳನ್ನು ಶೀಘ್ರವಾಗಿ ಮುಚ್ಚುವಂತೆ ತಾಕೀತು ಮಾಡಿದರು. ಮಳೆಯಿಂದಾಗಿ ತೀರಾ ಹದಗೆಟ್ಟಿರುವ ಕೆಲವು ರಸ್ತೆಗಳ ದುರಸ್ತಿಗೂ ನಿರ್ದೇಶನ ನೀಡಿದರು.
ಇದೇ ವೇಳೆ, ಕಸದ ರಾಶಿ ಸೃಷ್ಟಿಯಾಗಿರುವ ಕೆಲವು ಸ್ಥಳಗಳನ್ನು ಪರಿಶೀಲಿಸಿದ ಆಯುಕ್ತರು, ಕಸವನ್ನು ತಕ್ಷಣವೇ ವಿಲೇವಾರಿ ಮಾಡಲು ಮತ್ತು ರಸ್ತೆ ಬದಿ ಕಸ ಚೆಲ್ಲದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಸಿಬ್ಬಂದಿಗೆ ಆದೇಶಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರೂ ಸಹ ತಮ್ಮ ಪ್ರದೇಶದ ಹಲವು ಸಮಸ್ಯೆಗಳನ್ನು ಆಯುಕ್ತರ ಗಮನಕ್ಕೆ ತಂದು ಬಗೆಹರಿಸುವಂತೆ ಮನವಿ ಮಾಡಿದರು. ಈ ಎಲ್ಲಾ ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಆಯುಕ್ತರು ಸೂಚನೆ ನೀಡಿದರು.
ಈ ಪರಿಶೀಲನೆಯ ವೇಳೆ ಪಾಲಿಕೆ ಅಭಿಯಂತರರಾದ ಅನೂಪ ಕನೋಜ, ಆದಿಲ್ ಖಾನ್ ಪಠಾಣ್, ಕೆಯುಐಡಿಎಫ್‌ಸಿ ಹಾಗೂ ಎಲ್ ಆಂಡ್ ಟಿ ಕಂಪನಿ ಅಧಿಕಾರಿಗಳು, ವಿವೇಕ ಮಠದ ಸೇರಿದಂತೆ ಪಾಲಿಕೆಯ ಹಲವು ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
PublicNext
04/08/2026 07:12 pm
LOADING...