ನಂಜನಗೂಡು: ಕಬಿನಿ ಜಲಾಶಯದಿಂದ ಹೆಚ್ಚಿನ ಪ್ರಮಾಣದ ನೀರು ಹೊರಬಡುತ್ತಿರುವುದರಿಂದ ನಂಜನಗೂಡಿನಲ್ಲಿ ಪ್ರವಾಹದ ಆತಂಕ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ನಂಜನಗೂಡು ಕ್ಷೇತ್ರದ ಶಾಸಕರಾದ ದರ್ಶನ್ ಧ್ರುವನಾರಾಯಣ್ ಅವರು ಶ್ರೀ ನಂಜುಂಡೇಶ್ವರ ಸ್ವಾಮಿ ದೇವಾಲಯದ ಕಪಿಲಾ ನದಿತೀರ ಮತ್ತು ಪರಶುರಾಮ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಸಕರು ಕಪಿಲಾ ನದಿಯ ನೀರಿನ ಹರಿವು, ನದಿ ದಡದಲ್ಲಿರುವ ಮನೆಗಳು ಮತ್ತು ಪರಶುರಾಮ ದೇವಸ್ಥಾನದ ಸುತ್ತಮುತ್ತಲಿನ ಪರಿಸ್ಥಿತಿಯನ್ನು ಸ್ಥಳದಲ್ಲೇ ವೀಕ್ಷಿಸಿದರು. ಜೊತೆಗೆ ತಹಶೀಲ್ದಾರ್, ನಗರಸಭಾ ಆಯುಕ್ತರು ಮತ್ತು ಪೊಲೀಸ್ ಅಧಿಕಾರಿಗಳಿಂದ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದರು.
ಈ ವೇಳೆ ಮಾತನಾಡಿದ ಶಾಸಕ ದರ್ಶನ್ ಧ್ರುವನಾರಾಯಣ್ ಅವರು, "ನದಿಪಾತ್ರದ ನಿವಾಸಿಗಳಿಗೆ ಮುಂಚಿತವಾಗಿ ಎಚ್ಚರಿಕೆ ನೀಡಬೇಕು. ನೀರಿನ ಮಟ್ಟ ಹೆಚ್ಚಾದಲ್ಲಿ ಅವರನ್ನು ತಕ್ಷಣ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ವ್ಯವಸ್ಥೆ ಮಾಡಬೇಕು. ರಕ್ಷಣಾ ತಂಡಗಳು 24 ಗಂಟೆಯೂ ಸಿದ್ಧವಾಗಿರಬೇಕು" ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಜಾಗರೂಕರಾಗಿರಲು ಸೂಚನೆ ನೀಡಿದರು.
ಇದೇ ವೇಳೆ ಸಾರ್ವಜನಿಕರಲ್ಲಿ ಮನವಿ ಮಾಡಿದ ಶಾಸಕರು, "ಪ್ರಾಣಕ್ಕಿಂತ ಬೇರೇನೂ ಮುಖ್ಯವಲ್ಲ. ತಾಲೂಕು ಆಡಳಿತ ನೀಡುವ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಿ. ಮಕ್ಕಳನ್ನು ನದಿ ದಡಕ್ಕೆ ಕರೆದೊಯ್ಯಬೇಡಿ. ಯಾವುದೇ ತೊಂದರೆ ಇದ್ದಲ್ಲಿ ತಕ್ಷಣ ಅಧಿಕಾರಿಗಳನ್ನು ಸಂಪರ್ಕಿಸಿ. ಸುರಕ್ಷತೆಗೆ ಮೊದಲ ಆದ್ಯತೆ ನೀಡಿ" ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಡಾ. ಸ್ಮಿತಾ ರಾಮು, ನಗರಸಭಾ ಆಯುಕ್ತ ಬಸವರಾಜು, ಶ್ರೀಕಂಠೇಶ್ವರ ಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ, ಸ್ಥಳೀಯ ಮುಖಂಡರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
03/08/2026 08:06 pm