ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಂಜನಗೂಡು: ಸರ್ಕಾರಕ್ಕೆ ಸೆಡ್ಡು ಹೊಡೆದ ರೈತ - ಸ್ವಂತ ಖರ್ಚಿನಲ್ಲಿ ಬಸ್ ತಂಗುದಾಣ, ನೀರಿನ ತೊಟ್ಟಿ ನಿರ್ಮಾಣ!

ನಂಜನಗೂಡು: ರಸ್ತೆ, ನೀರು, ನೆರಳು - ಇವೆಲ್ಲವನ್ನೂ ಕೊಡುವುದು ಸರ್ಕಾರ, ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಕೆಲಸ. ಆದರೆ, ಇಲ್ಲೊಬ್ಬ ರೈತ, ನಾವು ಕಾಯೋದು ಬೇಡ, ನಾವೇ ಮಾಡೋಣ ಎಂದು ಕೆಲಸ ಮಾಡಿ ತೋರಿಸಿದ್ದಾನೆ.

ಹೌದು.. ವರುಣಾ ಕ್ಷೇತ್ರದ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ತಗಡೂರು ಗ್ರಾಮದ ಈ ಸಾಮಾನ್ಯ ರೈತ ಸ್ವಾಮಿ, ಕೃಷಿಯ ಜೊತೆಗೆ ಬಣ್ಣಾರಿ ಅಮ್ಮಾನ್ ಸಕ್ಕರೆ ಕಾರ್ಖಾನೆಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡಿಕೊಂಡೇ, ತಮ್ಮ ಸ್ವಂತ 1.20 ಲಕ್ಷ ರೂ. ಹಣದಲ್ಲಿ ಹೆದ್ದಾರಿ ಬದಿಯಲ್ಲಿ ಜನರಿಗೆ ಅನುಕೂಲವಾಗುವಂತೆ ಕೆಲಸ ಮಾಡಿದ್ದಾರೆ. ಅದೇನಪ್ಪಾ ಅಂದ್ರೆ ತಗಡೂರು ಗ್ರಾಮದ ಮುಖ್ಯ ರಸ್ತೆಯಲ್ಲಿರುವ ತಮ್ಮ ಎರಡೂವರೆ ಎಕರೆ ಜಮೀನಿನ ಮುಂಭಾಗದಲ್ಲಿ ರೈತ ಸ್ವಾಮಿ ಅವರು, ಪ್ರಯಾಣಿಕರಿಗಾಗಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ದಣಿದು ಬಂದವರಿಗೆ ಕೂರಲು ಆಸನಗಳು, ಮಳೆ-ಬಿಸಿಲು ಎಂದು ಬಂದವರಿಗೆ ವಿಶ್ರಾಂತಿಯ ಆಶ್ರಯ ತಂಗುದಾಣ, ಪ್ರಾಣಿ ಪಕ್ಷಿಗಳ ದಾಹ ನೀಗಿಸಲು ಮತ್ತು ಜಾನುವಾರುಗಳಿಗೂ ನೀರಿನ ತೊಟ್ಟಿ ನಿರ್ಮಾಣ. ಅಲ್ಲದೇ ಜಮೀನಿನ ಮರಗಳಲ್ಲಿ ಪಕ್ಷಿಗಳ ಅನುಕೂಲಕ್ಕಾಗಿ ಪಕ್ಷಿಗೂಡುಗಳನ್ನು ನಿರ್ಮಿಸಿದ್ದಾರೆ.

ತಗಡೂರು ಭಾಗದಲ್ಲಿ ನೀರಿನ ಕೊರತೆ ತುಂಬಾ ಇತ್ತು. ಜನರು ಮತ್ತು ದನ-ಕರುಗಳು ನೀರಿಗೆ ಪರದಾಡುತ್ತಿದ್ದರು. ಮಳೆ ಬಿಸಿಲು ಎನ್ನದೆ ಪ್ರಯಾಣಿಕರು ರಸ್ತೆಯಲ್ಲಿ ಓಡಾಡುತ್ತಿದ್ದರು. ಅದನ್ನು ನೋಡಿ ನನಗೆ ನೋವಾಯಿತು. ಕಳೆದ ಎರಡು ವರ್ಷದ ಹಿಂದೆ ಮೊದಲು ಜಾನುವಾರುಗಳಿಗೆ ಮತ್ತು ಪ್ರಯಾಣಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ. ಆಮೇಲೆ ಕೂರಲು ಆಸನ ಹಾಕಿದೆ. ಈಗ ಮಳೆ ಬರುತ್ತಿರುವುದರಿಂದ ದ್ವಿಚಕ್ರ ಸವಾರರು ಒದ್ದೆಯಾಗುತ್ತಿದ್ದರು, ಬೇಸಿಗೆಯಲ್ಲಿ ಬಿಸಿಲು ತಡೆಯೋಕೆ ಆಗ್ತಿರಲಿಲ್ಲ. ಅದಕ್ಕಾಗಿ ಈಗ ಶೆಡ್ ಕೂಡ ಕಟ್ಟಿಸಿದೆ ಎಂದು ರೈತ ಸ್ವಾಮಿ ಹೇಳುತ್ತಾರೆ.

ಸ್ವಾಮಿ ಅವರ ಈ ಕೆಲಸಕ್ಕೆ ಗ್ರಾಮಸ್ಥರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. "ಸರ್ಕಾರ ಮತ್ತು ಜನಪ್ರತಿನಿಧಿಗಳು ಮಾಡಬೇಕಿದ್ದ ಕೆಲಸವನ್ನು ಒಬ್ಬ ರೈತ ತನ್ನ ಜೇಬಿನಿಂದ ಮಾಡಿದ್ದಾನೆ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ. ಕೃಷಿಯ ಜೊತೆಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಸ್ವಾಮಿ ಅವರು, ತಮ್ಮ ಜಮೀನಿನಲ್ಲೂ ವಿವಿಧ ಬೆಳೆಗಳನ್ನು ಬೆಳೆಯುತ್ತಾರೆ. ಆದರೂ ಸಮಾಜದ ಬಗ್ಗೆ ಯೋಚಿಸುವ ಅವರ ಮನಸ್ಸು ಎಲ್ಲರಿಗೂ ಮಾದರಿಯಾಗಿದೆ.

ಸಿ.ಎಂ ಸುಗಂಧರಾಜು, ಪಬ್ಲಿಕ್ ನೆಕ್ಸ್ಟ್, ಮೈಸೂರು

Edited By :
PublicNext

PublicNext

03/08/2026 04:17 pm

Cinque Terre

11.46 K

Cinque Terre

0

ಸಂಬಂಧಿತ ಸುದ್ದಿ