ಚಿಕ್ಕಮಗಳೂರು: ಜಿಲ್ಲಾ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 35ಕ್ಕೂ ಹೆಚ್ಚು 'ಡಿ' ಗ್ರೂಪ್ ಸಿಬ್ಬಂದಿಗೆ ಭಾರಿ ವಂಚನೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಕಳೆದ ಮೂರು ವರ್ಷಗಳಿಂದ ಪ್ರತಿ ವರ್ಷ ತಲಾ 4 ತಿಂಗಳ ಪಿಎಫ್ ಹಣವನ್ನು ನೌಕರರ ಅಧಿಕೃತ ಇಪಿಎಫ್ (EPF) ಖಾತೆಗೆ ಜಮಾ ಮಾಡದೆ ಆಡಳಿತ ಮಂಡಳಿ ಹಾಗೂ ಗುತ್ತಿಗೆ ಏಜೆನ್ಸಿ ಅನ್ಯಾಯ ಎಸಗಿದೆ ಎನ್ನಲಾಗಿದೆ. ಮೈಸೂರು ಮೂಲದ 'ಸ್ಟಾರ್ ಎಂಪ್ಲಾಯ್‌ಮೆಂಟ್ ಬ್ಯೂರೋ' ಏಜೆನ್ಸಿಯ ಅಮರ್ ಎಂಬುವರು ನೌಕರರ ಪಿಎಫ್ ಮೊತ್ತವನ್ನು ಅವರ ವೈಯಕ್ತಿಕ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವ ಮೂಲಕ ತೀವ್ರ ವಂಚನೆ ಎಸಗಿದ್ದಾರೆ ಎಂದು ಸಂತ್ರಸ್ತ ಸಿಬ್ಬಂದಿ ಗಂಭೀರ ಆರೋಪ ಮಾಡಿದ್ದಾರೆ.
ಅಧಿಕೃತ ಪಿಎಫ್ ಖಾತೆಗೆ ಜಮೆಯಾಗಬೇಕಿದ್ದ ಹಣ ವೈಯಕ್ತಿಕ ಖಾತೆಗೆ ಬಂದಿದ್ದನ್ನು ಪ್ರಶ್ನಿಸಿದ ಸಿಬ್ಬಂದಿಗೆ ಏಜೆನ್ಸಿಯಿಂದ ತೀವ್ರ ಕಿರುಕುಳ ಹಾಗೂ ಬೆದರಿಕೆಗಳು ಎದುರಾಗಿವೆ. "ಈ ಬಗ್ಗೆ ಧ್ವನಿ ಎತ್ತಿದರೆ ಕೆಲಸದಿಂದ ವಜಾ ಮಾಡುತ್ತೇವೆ ಮತ್ತು ಪೊಲೀಸ್ ದೂರು ನೀಡುತ್ತೇವೆ" ಎಂದು ಏಜೆನ್ಸಿ ಬೆದರಿಸುತ್ತಿದೆ ಎಂದು ನೌಕರರು ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ 8 ತಿಂಗಳಿಂದ ಈ ಅನ್ಯಾಯದ ವಿರುದ್ಧ ನೌಕರರು ನಿರಂತರ ಹೋರಾಟ ನಡೆಸುತ್ತಿದ್ದರೂ ಯಾವುದೇ ಸೂಕ್ತ ಪರಿಹಾರ ಸಿಕ್ಕಿರಲಿಲ್ಲ. ಇದೀಗ ಲೀಸಾ ಫೌಂಡೇಶನ್ ನೌಕರರ ಬೆಂಬಲಕ್ಕೆ ನಿಂತಿದ್ದು, ಸಂಸ್ಥೆಯ ಸಂಸ್ಥಾಪಕಿ ಸಂಗೀತಾ ಪ್ರಸಾದ್ ಹಾಗೂ ನೌಕರರ ಪ್ರತಿನಿಧಿ ಮಂಜುಳಾ ನೇತೃತ್ವದಲ್ಲಿ ಹೋರಾಟ ತೀವ್ರಗೊಂಡಿದೆ. ಈ ಕುರಿತು ಈಗಾಗಲೇ ಸ್ಥಳೀಯ ಶಾಸಕರು, ಮೆಡಿಕಲ್ ಕಾಲೇಜಿನ ಡೀನ್, ಜಿಲ್ಲಾಧಿಕಾರಿಗಳು ಹಾಗೂ ಕಾರ್ಮಿಕ ಇಲಾಖೆಯ ಅಧಿಕಾರಿಗಳಿಗೆ ಅಧಿಕೃತ ಮನವಿ ಸಲ್ಲಿಸಲಾಗಿದ್ದು, ವಂಚನೆ ಎಸಗಿದ ಏಜೆನ್ಸಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ಸದ್ಯ ಸಂತ್ರಸ್ತ ನೌಕರರು ನ್ಯಾಯಕ್ಕಾಗಿ ಕಾನೂನು ಸಮರಕ್ಕೆ ಧುಮುಕಿದ್ದಾರೆ.
Kshetra Samachara
04/08/2026 07:55 pm
LOADING...