ಚಿಕ್ಕಮಗಳೂರು: ಸಚಿವ ಸಂಪುಟ ವಿಸ್ತರಣೆಯಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಸಚಿವ ಸ್ಥಾನ ನೀಡದಿರುವುದು ತೀವ್ರ ನಿರಾಸೆ ಮೂಡಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ತಿಳಿಸಿದ್ದಾರೆ.
ಚಿಕ್ಕಮಗಳೂರಿನ ಬಿಜೆಪಿ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯವರೇ ಸಚಿವರಾದರೆ ಸಮಸ್ಯೆಗಳನ್ನು ಪರಿಹರಿಸಿ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ನೆಪಮಾತ್ರಕ್ಕೆ ಕೆಡಿಪಿ ಸಭೆ, ಧ್ವಜಾರೋಹಣ ಅಥವಾ ಸಮಾರಂಭಗಳಿಗೆ ಬಂದು ಹೋಗುವ ಉಸ್ತುವಾರಿ ಸಚಿವರ ಬದಲಿಗೆ ಸ್ಥಳೀಯ ನಾಯಕನಿಗೆ ಅವಕಾಶ ನೀಡಬೇಕೆಂಬ ಅಪೇಕ್ಷೆ ಇತ್ತು. ಆದರೆ ಅದು ಈಡೇರದಿರುವುದು ದುರದೃಷ್ಟಕರವಾಗಿದೆ ಎಂದರು.
ಚಿಕ್ಕಮಗಳೂರು ಜಿಲ್ಲೆಗೆ ಪ್ರಾತಿನಿಧ್ಯ ನೀಡದೆ ಅವಕಾಶ ವಂಚಿತಗೊಳಿಸಿರುವುದು ಕಾಂಗ್ರೆಸ್ ಪಕ್ಷ ಜಿಲ್ಲೆಗೆ ಮಾಡಿದ ಅಪಚಾರ. ಜಿಲ್ಲೆಯಲ್ಲಿ 5ಕ್ಕೆ 5 ಸ್ಥಾನಗಳನ್ನು ಕಾಂಗ್ರೆಸ್‌ಗೆ ನೀಡಿದರೂ ಈ ರೀತಿ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಿದರು.
ಸಂಪುಟ ವಿಸ್ತರಣೆಯ ಆರಂಭಿಕ ಪಟ್ಟಿಯಲ್ಲಿ ಗಾಯತ್ರಿ ಶಾಂತೇಗೌಡ ಅವರ ಹೆಸರನ್ನು ಎಐಸಿಸಿ ಘೋಷಿಸಿ, ನಂತರ ಕೊನೆಯ ಕ್ಷಣದಲ್ಲಿ ಅವರ ಹೆಸರನ್ನು ಕೈಬಿಟ್ಟಿರುವುದು ಬೇಸರದ ಸಂಗತಿಯಾಗಿದೆ. ಹೆಸರನ್ನು ಘೋಷಿಸದೇ ಇದ್ದಿದ್ದರೆ ಯಾವುದೇ ಸಮಸ್ಯೆ ಇರುತ್ತಿರಲಿಲ್ಲ. ಆದರೆ ಘೋಷಣೆ ಮಾಡಿದ ಬಳಿಕ ಪ್ರಮಾಣ ವಚನದಿಂದ ಹೊರಗಿಡುವುದು ಸರಿಯಲ್ಲ. ಇಂತಹ ನಡೆಗಳನ್ನು ಯಾವುದೇ ಪಕ್ಷ ಯಾರಿಗೂ ಮಾಡಬಾರದು ಎಂದು ಹೇಳಿದರು.
ಈ ಸಂಪುಟದಲ್ಲಿ ಒಬ್ಬ ಮಹಿಳೆಗೂ ಸ್ಥಾನ ನೀಡದಿರುವುದು ಮಹಿಳೆಯರಿಗೆ ಮಾಡಿದ ಅನ್ಯಾಯವಾಗಿದೆ. ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷದ ಮಾತಿಗೂ ಕೃತಿಗೂ ಇರುವ ವ್ಯತ್ಯಾಸವನ್ನು ಇದು ತೋರಿಸುತ್ತದೆ ಎಂದು ಸಿ.ಟಿ. ರವಿ ವಾಗ್ದಾಳಿ ನಡೆಸಿದರು.
PublicNext
05/08/2026 05:30 pm