ಚಿಕ್ಕಮಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬಹುಕೋಟಿ ಅನುದಾನ ದುರುಪಯೋಗ ಪ್ರಕರಣ ಹಾಗೂ ಮಾಜಿ ಸಚಿವ ಬಿ. ನಾಗೇಂದ್ರ ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುತ್ತಿರುವ ಕ್ರಮವನ್ನು ಖಂಡಿಸಿ ವಿಧಾನ ಪರಿಷತ್ ಸದಸ್ಯ ಸಿ. ಟಿ. ರವಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬೃಹತ್ ಹಗರಣದ ಪರಿಣಾಮವಾಗಿ ದಕ್ಷ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು ಹಾಗೂ ಆರೋಪ ಎದುರಿಸುತ್ತಿದ್ದ ಸಚಿವರು ಜೈಲು ಸೇರಬೇಕಾಯಿತು ಎಂದು ಅವರು ಸ್ಮರಿಸಿದ್ದಾರೆ. ಎಸ್.ಟಿ. ಸಮುದಾಯದ ಬಡ ಜನರ ಗಂಗಾ ಕಲ್ಯಾಣ, ಸ್ವಯಂ ಉದ್ಯೋಗ ಹಾಗೂ ವಾಹನ ಖರೀದಿ ಸೇರಿದಂತೆ ನಾನಾ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಕೆಯಾಗಬೇಕಿದ್ದ ₹187 ಕೋಟಿಗೂ ಅಧಿಕ ಹಣವು ಅಕ್ರಮವಾಗಿ ಐಷಾರಾಮಿ ಕಾರ್ ಶೋರೂಂ, ಜ್ಯುವೆಲರಿ ಶಾಪ್, ಬಾರ್ ಮತ್ತು ವೈನ್ ಶಾಪ್‌ಗಳಿಗೆ ವರ್ಗಾವಣೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣೆಯ ಸಮಯದಲ್ಲಿ ಮತದಾರರಿಗೆ ಹೆಂಡ ಹಂಚಲು ಈ ಹಣವನ್ನು ಬಳಸಲಾಗಿದೆ ಎಂಬ ಗಂಭೀರ ಆರೋಪಗಳಿವೆ ಎಂದು ಅವರು ಉಲ್ಲೇಖಿಸಿದ್ದಾರೆ.
ಈ ಪ್ರಕರಣದಲ್ಲಿ ಬಿ. ನಾಗೇಂದ್ರ ಅವರಿಗೆ ಸಿಬಿಐ ಅಥವಾ ಇಡಿ ಯಾವುದೇ ಕ್ಲೀನ್ ಚಿಟ್ ನೀಡಿಲ್ಲ ಹಾಗೂ 'ಬಿ'-ರಿಪೋರ್ಟ್ ಕೂಡ ಸಲ್ಲಿಕೆಯಾಗಿಲ್ಲ ಎಂದು ಸಿ.ಟಿ. ರವಿ ಸ್ಪಷ್ಟಪಡಿಸಿದ್ದಾರೆ. ಹೀಗಿದ್ದರೂ ಭ್ರಷ್ಟಾಚಾರದ ಆರೋಪ ಹೊತ್ತು ಜೈಲಿಗೆ ಹೋಗಿ ಬಂದವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಸರ್ಕಾರವು ಬಹಿರಂಗವಾಗಿ ಭ್ರಷ್ಟಾಚಾರವನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿದ್ದಾರೆ.
"ಕಾಂಗ್ರೆಸ್‌ನಲ್ಲಿ ಲೂಟಿ ಹೊಡೆದವರಿಗೆ ಮಾತ್ರ ಅವಕಾಶ ಸಿಗುತ್ತದೆ, ಲೂಟಿ ಹೊಡೆಯದ ನಮಗೆ ಯಾವುದೇ ಗಾಡ್‌ಫಾದರ್ ಇಲ್ಲ" ಎಂದು ತುಮಕೂರಿನ ಮಾಜಿ ಸಚಿವರೊಬ್ಬರು ಆಡಿದ ಮಾತುಗಳಿಗೆ ಈ ಸಂಪುಟ ಪುನರ್‌ಸೇರ್ಪಡೆಯೇ ಪ್ರತ್ಯಕ್ಷ ಸಾಕ್ಷಿಯಾಗಿದೆ. ಗಂಭೀರ ಭ್ರಷ್ಟಾಚಾರದ ಕಳಂಕ ಬೆನ್ನಿಗಿದ್ದರೂ ಮತ್ತೆ ಮಂತ್ರಿ ಪಟ್ಟ ನೀಡುತ್ತಿರುವುದು ಈ ಸರ್ಕಾರದ ಭ್ರಷ್ಟ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಸಿ.ಟಿ. ರವಿ ವಾಗ್ದಾಳಿ ನಡೆಸಿದ್ದಾರೆ.
PublicNext
05/08/2026 09:55 pm