ಚಿಕ್ಕಮಗಳೂರು: ಕಾಫಿನಾಡಿನ ಮಲೆನಾಡು ಭಾಗದಲ್ಲಿ ಸತತವಾಗಿ ಸುರಿಯುತ್ತಿರುವ ಭಾರಿ ಮಳೆಗೆ ರಸ್ತೆಗಳು ಪೂರ್ತಿಯಾಗಿ ಹದಗೆಟ್ಟು ಹೋಗಿದ್ದು, ವಾಹನ ಸಂಚಾರ ತೀವ್ರ ದುಸ್ತರವಾಗಿದೆ. ಅದರಲ್ಲೂ ಚಿಕ್ಕಮಗಳೂರಿನಿಂದ ಬಾಳೆಹೊನ್ನೂರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಕಂದಕಗಳು ಸೃಷ್ಟಿಯಾಗಿದ್ದು, ಸವಾರರ ಜೀವಕ್ಕೆ ಆಪತ್ತು ತಂದೊಡ್ಡಿದ್ದವು.
ಪ್ರತಿದಿನ ಈ ಮಾರ್ಗದಲ್ಲಿ ಧಾರ್ಮಿಕ ಕ್ಷೇತ್ರಗಳಾದ ಶೃಂಗೇರಿ, ಹೊರನಾಡು, ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠ ಸೇರಿದಂತೆ ಪ್ರಸಿದ್ಧ ಪ್ರವಾಸಿ ತಾಣಗಳಿಗೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ಇತ್ತೀಚೆಗೆ ಚಿಕ್ಕಮಗಳೂರು ತಾಲೂಕಿನ ಕಡಬಗೆರೆ ಬಳಿ ರಸ್ತೆಯಲ್ಲಿ ಸೃಷ್ಟಿಯಾಗಿದ್ದ ದೈತ್ಯ ಗುಂಡಿಯಿಂದಾಗಿ ಅಪಘಾತವೊಂದು ಸಂಭವಿಸಿತ್ತು.
ಇದರಿಂದ ಆಕ್ರೋಶಗೊಳ್ಳುವ ಬದಲು ಪರಿಹಾರ ಕಂಡುಕೊಳ್ಳಲು ಮುಂದಾದ ಸ್ಥಳೀಯ ಯುವಕರು ಒಟ್ಟುಗೂಡಿ, ರಸ್ತೆ ಗುಂಡಿಗಳನ್ನು ಮುಚ್ಚುವ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ. ಯುವಕರ ಈ ಶ್ರಮದಾನದ ಪರಿಣಾಮವಾಗಿ ಇದೀಗ ಈ ರಸ್ತೆಯಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಕೊಂಚ ಮಟ್ಟಿನ ಅನುಕೂಲವಾಗಿದೆ. ಅಧಿಕಾರಿಗಳ ನೆರವಿಗಾಗಿ ಕಾಯದೆ ತಾವೇ ಮುಂದೆ ನಿಂತು ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸಿದ ಯುವಕರ ಕಾರ್ಯಕ್ಕೆ ಸ್ಥಳೀಯರು ಹಾಗೂ ವಾಹನ ಸವಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
PublicNext
05/08/2026 01:08 pm
LOADING...