ಶೃಂಗೇರಿ : ಕಾಫಿನಾಡಿನ ಮಲೆನಾಡು ಭಾಗದಲ್ಲಿ ಕಳೆದ ಒಂದು ವಾರದಿಂದ ಸತತವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಮಲೆನಾಡಿನ ಚಿತ್ರಣವೇ ಸಂಪೂರ್ಣವಾಗಿ ಬದಲಾಗಿದೆ. ಆರಂಭದಲ್ಲಿ ಮಳೆ ಕೊರತೆಯಿಂದ ಕಂಗಾಲಾಗಿದ್ದ ಜಿಲ್ಲೆಯಲ್ಲಿ ಇದೀಗ ಮಳೆರಾಯನ ಅಬ್ಬರ ತೀವ್ರಗೊಂಡಿದ್ದು, ಶೃಂಗೇರಿ ತಾಲೂಕು ನೆರೆಯ ಹೊಸ್ತಿಲಲ್ಲಿ ಬಂದು ನಿಂತಿದೆ.
ನಿರಂತರ ವರುಣಾರ್ಭಟದಿಂದಾಗಿ ತುಂಗಾ ನದಿ ಅಪಾಯದ ಮಟ್ಟ ಮೀರಿ ಮೈದುಂಬಿ ಉಕ್ಕಿ ಹರಿಯುತ್ತಿದ್ದು, ಜಲಾನಯನ ಪ್ರದೇಶಗಳಲ್ಲಿ ನೆರೆ ಭೀತಿ ಆವರಿಸಿದೆ. ನದಿಯ ಈ ರೌದ್ರರಮಣೀಯ ರೂಪ ಹಾಗೂ ಪ್ರಕೃತಿಯ ಅಪ್ರತಿಮ ಸೌಂದರ್ಯ ಡ್ರೋನ್ ಕ್ಯಾಮರಾದಲ್ಲಿ ಅತ್ಯಂತ ಆಕರ್ಷಕವಾಗಿ ಸೆರೆಯಾಗಿದೆ. ಪವಿತ್ರ ಶಾರದಾ ಪೀಠದ ಅಂಚಿನಲ್ಲೇ ರೌದ್ರನರ್ತನ ನೀಡುತ್ತಿರುವ ತುಂಗೆ, ಮಠದ ಪ್ರಾಂಗಣದ ಸನಿಹದವರೆಗೂ ಜಲಾವೃತಗೊಂಡು ಹರಿಯುತ್ತಿದ್ದಾಳೆ.
ಇನ್ನು ಶೃಂಗೇರಿಯ ಗಾಂಧಿ ಮೈದಾನ ಸಂಪೂರ್ಣ ಜಲಾವೃತಗೊಂಡಿದ್ದು, ಇಡೀ ಪ್ರದೇಶವೇ ವಿಶಾಲ ಸರೋವರದಂತೆ ಕಂಗೊಳಿಸುತ್ತಿದೆ. ಸುತ್ತಲಿನ ಕಡು ಹಸಿರಿನ ಕಾನನ, ಮೋಡ ಕವಿದ ಮುಸುಕಿನ ವಾತಾವರಣ ಮತ್ತು ರಭಸವಾಗಿ ಹರಿಯುವ ನದಿಯ ನೀರು ಇಡೀ ಶೃಂಗೇರಿ ಪಟ್ಟಣಕ್ಕೆ ವಿಶಿಷ್ಟ ಕಳೆ ತಂದಿದೆ. ನದಿ ಅಪಾಯದ ಹಂತ ಮೀರಿ ಹರಿಯುತ್ತಿದ್ದರೂ, ಕಾಲುಸೇತುವೆ ಮೇಲೆ ನಿಂತು ಉಕ್ಕಿ ಹರಿಯುವ ತುಂಗೆಯ ವೈಭವವನ್ನು ಭಕ್ತರು ಹಾಗೂ ಪ್ರವಾಸಿಗರು ಅತ್ಯಂತ ಕುತೂಹಲದಿಂದ ಕಣ್ಣುಂಬಿಕೊಳ್ಳುತ್ತಿದ್ದಾರೆ.
PublicNext
05/08/2026 01:56 pm
LOADING...