ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಳಸ: ಪ್ರವಾಸಿಗರ ಹುಚ್ಚಾಟ - ಜೀವದ ಹಂಗು ತೊರೆದು ಪ್ರವಾಹದ ಹಳ್ಳ ದಾಟಿದ ಟ್ರೆಕ್ಕರ್‌ಗಳು

ಚಿಕ್ಕಮಗಳೂರು/ಕಳಸ: ಮಲೆನಾಡಿನ ಸೌಂದರ್ಯಕ್ಕೆ ಮಾರುಹೋಗಿ ಆಗಮಿಸುವ ಪ್ರವಾಸಿಗರು ಕೆಲವೊಮ್ಮೆ ಮಾಡುವ ಸಾಹಸಗಳು ಜೀವಕ್ಕೇ ಕಂಟಕವಾಗುತ್ತಿವೆ. ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಪ್ರಸಿದ್ಧ ನೇತ್ರಾವತಿ ಪೀಕ್ ಹಾಗೂ ಕುದುರೆಮುಖ ಮಾರ್ಗಮಧ್ಯೆ ಇರುವ ಹಳ್ಳವೊಂದರಲ್ಲಿ ಪ್ರವಾಸಿಗರು ಪ್ರಾಣದ ಹಂಗು ತೊರೆದು ನಡೆಸಿದ ಹುಚ್ಚಾಟ ಈಗ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳ-ಕೊಳ್ಳಗಳು ಮೈದುಂಬಿ, ರಭಸದಿಂದ ಭೋರ್ಗರೆಯುತ್ತಾ ಧುಮ್ಮಿಕ್ಕುತ್ತಿವೆ. ಇಂತಹ ಸಂದರ್ಭದಲ್ಲಿ ಪ್ರವಾಸಿಗರು ಕೇವಲ ಒಂದು ಹಗ್ಗದ ನೆರವಿನಿಂದ ಅಬ್ಬರಿಸುವ ನೀರಿನ ಪ್ರವಾಹವನ್ನು ದಾಟಲು ಸಾಹಸ ಪಟ್ಟಿದ್ದಾರೆ. ನೋಡುವವರ ಎದೆಝಲ್ ಎನಿಸುವಂತಿರುವ ಈ ದೃಶ್ಯಗಳು, ಜಾಗರೂಕತೆಯ ಎಲ್ಲ ಎಲ್ಲೆಗಳನ್ನು ಮೀರಿದ ಹುಚ್ಚುತನದ ಪರಮಾವಧಿಯಂತೆ ಕಾಣಿಸುತ್ತಿವೆ.

ನೀರಿನ ಭೋರ್ಗರೆತಕ್ಕೆ ಸಣ್ಣದಾಗಿ ಕಾಲು ಜಾರಿದರೂ ಸಾಕು, ಕ್ಷಣಾರ್ಧದಲ್ಲಿ ಕೊಚ್ಚಿಹೋಗುವ ಅಪಾಯ ಎದುರಾಗುತ್ತದೆ. ಕೇವಲ ಮೋಜಿಗಾಗಿ ಅಥವಾ ಟ್ರೆಕ್ಕಿಂಗ್ ಉತ್ಸಾಹದಲ್ಲಿ ಇಂತಹ ಅಪಾಯಕಾರಿ ಹಾದಿ ತುಳಿಯುತ್ತಿರುವ ಪ್ರವಾಸಿಗರ ನಡವಳಿಕೆ ಜವಾಬ್ದಾರಿರಹಿತವಾಗಿದೆ. ಒಂದೊಮ್ಮೆ ಹೆಚ್ಚು-ಕಡಿಮೆಯಾಗಿ ಜೀವಹಾನಿ ಸಂಭವಿಸಿದರೆ ಅದಕ್ಕೆ ಯಾರು ಹೊಣೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ.

ಮಲೆನಾಡಿನಲ್ಲಿ ಮಳೆಯಾರ್ಭಟ ಹೆಚ್ಚಿರುವ ಈ ಸಮಯದಲ್ಲಿ ಪ್ರವಾಸಿಗರ ಸುರಕ್ಷತೆ ಅತ್ಯಂತ ಮುಖ್ಯವಾಗಿದೆ. ಇಂತಹ ಅಪಾಯಕಾರಿ ಸಂದರ್ಭಗಳಲ್ಲಿ ತಕ್ಷಣವೇ ಎಚ್ಚೆತ್ತುಕೊಳ್ಳಬೇಕಾದ ಅರಣ್ಯ ಇಲಾಖೆ ಹಾಗೂ ತಾಲೂಕು ಆಡಳಿತ, ನೇತ್ರಾವತಿ ಪೀಕ್‌ನಂತಹ ಸೂಕ್ಷ್ಮ ಹಾಗೂ ಅಪಾಯಕಾರಿ ಟ್ರೆಕ್ಕಿಂಗ್ ಪ್ರದೇಶಗಳಿಗೆ ಪ್ರವಾಸಿಗರ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸುವುದು ಒಳಿತು. ಮುನ್ನೆಚ್ಚರಿಕೆ ಕ್ರಮಗಳನ್ನು ಬಿಗಿಗೊಳಿಸದಿದ್ದರೆ ಭವಿಷ್ಯದಲ್ಲಿ ದೊಡ್ಡ ದುರಂತ ಸಂಭವಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

Edited By :
PublicNext

PublicNext

03/08/2026 08:50 pm

Cinque Terre

21.26 K

Cinque Terre

0

ಸಂಬಂಧಿತ ಸುದ್ದಿ