ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಸಂಪುಟ ವಿಸ್ತರಣೆ ಸ್ವಾಭಿಮಾನಕ್ಕೆ ಮಾಡಿದ ಅಪಮಾನ : ಕಾಂಗ್ರೆಸ್ ವಿರುದ್ಧ ಸಿ.ಟಿ. ರವಿ ತೀವ್ರ ವಾಗ್ದಾಳಿ!

ಚಿಕ್ಕಮಗಳೂರು: ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಮತ್ತು ನೂತನ ಸಚಿವರ ಆಯ್ಕೆ ಪ್ರಕ್ರಿಯೆಯು ಭಾರತೀಯ ಸಂವಿಧಾನದ ಆಶಯಗಳಿಗೆ ಹಾಗೂ ಕರ್ನಾಟಕದ ಜನರ ಸ್ವಾಭಿಮಾನಕ್ಕೆ ಎಸಗಿದ ಘೋರ ಅಪಮಾನ ಎಂದು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನ ವಿಧಾನ ಪರಿಷತ್ ವಿಪಕ್ಷ ನಾಯಕರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ವಿಚಾರದಲ್ಲಿ ಕಾಂಗ್ರೆಸ್ ವರಿಷ್ಠರು ಸಲಹೆ ನೀಡುವ ಬದಲು ಆದೇಶ ನೀಡುವ ರಾಜಕಾರಣ ಮಾಡಿದ್ದಾರೆ. ಸ್ವಾಭಿಮಾನದ ಬಗ್ಗೆ ಸದಾ ಮಾತನಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಗುಲಾಮಗಿರಿಯ ಮನೋಭಾವದ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಭ್ರಷ್ಟಾಚಾರಕ್ಕೆ ಬಹಿರಂಗ ಬೆಂಬಲ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣದಲ್ಲಿ ಚಾರ್ಜ್‌ಶೀಟ್ ಎದುರಿಸುತ್ತಿರುವ ಬಿ. ನಾಗೇಂದ್ರ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಂಡಿರುವುದನ್ನು ಕಟುವಾಗಿ ಖಂಡಿಸಿದ ಡಾ. ರವಿ, "ಕೇವಲ ಎಫ್‌ಐಆರ್ ಅಲ್ಲ, ಚಾರ್ಜ್‌ಶೀಟ್ ಸಲ್ಲಿಕೆಯಾಗಿ ಹಣ-ಆಸ್ತಿ ಜಪ್ತಿಯಾಗಿದ್ದರೂ ಅವರಿಗೆ ಸಚಿವ ಸ್ಥಾನ ನೀಡಿರುವುದು ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ನೀಡಿದ ಬಹಿರಂಗ ಮುದ್ರೆ. ಎಸ್‌ಸಿ-ಎಸ್‌ಟಿ ಸಮುದಾಯದ ಅಭಿವೃದ್ಧಿಗೆ ಮೀಸಲಿದ್ದ ಹಣ ಲೂಟಿ ಮಾಡಿದವರಿಗೆ ಮತ್ತೆ ಅಧಿಕಾರ ನೀಡುವ ಮೂಲಕ ಕಾಂಗ್ರೆಸ್ ಆ ಸಮುದಾಯಕ್ಕೆ ಮಹಾದ್ರೋಹ ಬಗೆದಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ, "ಎಲ್ಲವನ್ನೂ ಬಹಿರಂಗಪಡಿಸುತ್ತೇನೆ" ಎಂಬ ಬೆದರಿಕೆ ಅಥವಾ ಬ್ಲ್ಯಾಕ್‌ಮೇಲ್‌ಗೆ ಮಣಿದು ಈ ಸಚಿವ ಸ್ಥಾನ ನೀಡಲಾಗಿದೆಯೇ ಎಂಬ ಸಂಶಯ ಮೂಡುತ್ತಿದೆ ಎಂದು ಆರೋಪಿಸಿದರು. ಸಂಪುಟ ವಿಸ್ತರಣೆಯ ವೈಫಲ್ಯಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ತಿಳುವಳಿಕೆ ಇಲ್ಲದೆ ಶಿಕ್ಷಣ ಕ್ಷೇತ್ರದಲ್ಲಿ ವಿಫಲರಾದವರಿಗೆ ಹಾಗೂ ಕಾರ್ಮಿಕ ಇಲಾಖೆಯ ಕಿಟ್ ಹಗರಣದ ಆರೋಪ ಎದುರಿಸುತ್ತಿರುವವರಿಗೆ ಮತ್ತೆ ಸಚಿವ ಸ್ಥಾನ ನೀಡಿ ಬಹುಮಾನ ನೀಡಲಾಗಿದೆ ಎಂದರು.

ಅಲ್ಲದೆ, ಮಹಿಳಾ ಸಬಲೀಕರಣದ ಬಗ್ಗೆ ಬೊಬ್ಬೆ ಹೊಡೆಯುವ ಕಾಂಗ್ರೆಸ್, ತನ್ನದೇ ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸಮರ್ಪಕ ಪ್ರಾತಿನಿಧ್ಯ ನೀಡದೆ ವಂಚಿಸಿದೆ ಎಂದು ಟೀಕಿಸಿದರು.ಸಂಪುಟ ವಿಸ್ತರಣೆ ಹಾಗೂ ಪ್ರಮಾಣವಚನ ಸಮಾರಂಭದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ದೂರ ಉಳಿದಿರುವುದು ಸರ್ಕಾರದ ಒಳಗಿನ ತೀವ್ರ ಅಸಮಾಧಾನಕ್ಕೆ ಸಾಕ್ಷಿಯಾಗಿದೆ. ಕೆಪಿಎಸ್‌ಸಿ ನೇಮಕಾತಿ ಅಕ್ರಮ ಸೇರಿದಂತೆ ರಾಜ್ಯದ ಹಿತಾಸಕ್ತಿಗೆ ಧಕ್ಕೆ ತರುವ ಪ್ರತಿಯೊಂದು ವಿಷಯದಲ್ಲೂ ಬಿಜೆಪಿ ವಿಧಾನಸಭೆಯ ಒಳಗೂ ಮತ್ತು ಹೊರಗೂ ಜನಪರ ಹೋರಾಟ ರೂಪಿಸಲಿದೆ ಎಂದು ಅವರು ಎಚ್ಚರಿಸಿದರು.

ಗೋಷ್ಠಿಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಸ್.ಎಲ್. ಭೋಜೇಗೌಡ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

04/08/2026 10:47 pm

Cinque Terre

2.26 K

Cinque Terre

0

ಸಂಬಂಧಿತ ಸುದ್ದಿ