ಚಿಕ್ಕಮಗಳೂರು: ರಾಜ್ಯದಲ್ಲಿ ಇತ್ತೀಚೆಗೆ ನಡೆದ ಪೋಲಿಸ್ ನೇಮಕಾತಿ ಪರೀಕ್ಷೆಯಲ್ಲಿ ಭಾರೀ ಅಕ್ರಮಗಳು ನಡೆದಿವೆ ಎಂದು ಚಿಕ್ಕಮಗಳೂರು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ತೀವ್ರವಾಗಿ ಖಂಡಿಸಿದ್ದಾರೆ.
ಈ ಎಲ್ಲಾ ಗೊಂದಲಗಳಿಗೆ ನೈತಿಕ ಹೊಣೆ ಹೊತ್ತು ಸಚಿವ ಪ್ರಿಯಾಂಕ್ ಖರ್ಗೆ ತಕ್ಷಣವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಬಡ ಮತ್ತು ರೈತ ಕುಟುಂಬಗಳ ಸಾವಿರಾರು ಸಾಮಾನ್ಯ ಅಭ್ಯರ್ಥಿಗಳು ತಮ್ಮ ಭವಿಷ್ಯದ ಕನಸುಗಳೊಂದಿಗೆ ಪರೀಕ್ಷೆ ಬರೆಯಲು ಬಂದಿದ್ದರೆ, ಅವರ ಭವಿಷ್ಯದ ಜೊತೆ ಸರ್ಕಾರ ಗೋಲ್‌ಮಾಲ್ ನಡೆಸಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನೇಕ ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನೆ ಪತ್ರಿಕೆ ತಡವಾಗಿ ನೀಡಲ್ಪಟ್ಟಿರುವುದು, OMR ಶೀಟ್‌ಗಳ ಅಕ್ರಮ ಹಾಗೂ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲದೆ ಬಸ್ ಸಿಗದೇ ನೂರಾರು ಅಭ್ಯರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿರುವುದು ಸರ್ಕಾರದ ಬೇಜವಾಬ್ದಾರಿಗೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಅವರು ದೇಶಾದ್ಯಂತ ನಡೆಯುವ ನೀಟ್ (NEET) ಪರೀಕ್ಷೆ ವಿಚಾರದಲ್ಲಿ ಪ್ರತಿ ಗಂಟೆಗೊಮ್ಮೆ ಟ್ವೀಟ್ ಮಾಡುತ್ತಾ ಕೇಂದ್ರ ಸರ್ಕಾರವನ್ನು ಪ್ರಶ್ನಿಸುವ ಸಚಿವರು, ತಮ್ಮದೇ ರಾಜ್ಯದ ಕೆಇಎ (KEA) ಪರೀಕ್ಷಾ ಅಕ್ರಮದ ಬಗ್ಗೆ ಮಾತನಾಡುವುದಿರಲಿ, ಉಡಾಫೆಯ ಉತ್ತರ ನೀಡುತ್ತಿರುವುದು ಖಂಡನೀಯ. ಅಭ್ಯರ್ಥಿಗಳ ನ್ಯಾಯಯುತ ಹೋರಾಟದ ಪರವಾಗಿ ನಾವು ಸಾವಿರ ದಿನಗಳ ಉಪವಾಸ ಸತ್ಯಾಗ್ರಹಕ್ಕೂ ಸಿದ್ಧರಿದ್ದೇವೆ. ಆದ್ದರಿಂದ ಪ್ರಿಯಾಂಕ್ ಖರ್ಗೆ ಅವರು ತಕ್ಷಣವೇ ತಮ್ಮ ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಬೇಕೆಂದು ಸಂತೋಷ್ ಕೋಟ್ಯಾನ್ ಆಗ್ರಹಿಸಿದ್ದಾರೆ.
PublicNext
04/08/2026 07:04 pm