ಚಿಕ್ಕಮಗಳೂರು: "ಕಳೆದ ನಾಲ್ಕೂವರೆ ವರ್ಷಗಳ ಸುದೀರ್ಘ ಹೋರಾಟದ ನಂತರ ಸತ್ಯಕ್ಕೆ ಜಯ ಸಿಕ್ಕಿದ್ದು, ಚಿಕ್ಕಮಗಳೂರು ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾಗಿ ಗಾಯತ್ರಿ ಶಾಂತೇಗೌಡ ಅವರು ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಹೈಕೋರ್ಟ್ ತೀರ್ಪು ಎತ್ತಿ ಹಿಡಿಯುವ ಮೂಲಕ 'ಸತ್ಯಕ್ಕೆ ಎಂದಿಗೂ ಸಾವಿಲ್ಲ' ಎಂಬುದು ನಿರೂಪಿತವಾಗಿದೆ" ಎಂದು ಕಾಂಗ್ರೆಸ್ ಮುಖಂಡ ಭರತ್ ಉಪ್ಪಳ್ಳಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಳೆದ ನಾಲ್ಕೂವರೆ ವರ್ಷಗಳಿಂದ ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್ ಅವರು ಪಡೆದಿರುವ ಸಭಾಪತಿ/ಶಾಸಕ ಸ್ಥಾನದ ಎಲ್ಲಾ ಭತ್ಯೆಗಳು ಹಾಗೂ ಸರ್ಕಾರಿ ಸೌಲಭ್ಯಗಳನ್ನು ಸರ್ಕಾರ ಕೂಡಲೇ ವಾಪಸ್ ಪಡೆಯಬೇಕು. ಅವರು ಶಾಸಕರಾಗಿ ಅನರ್ಹಗೊಂಡಿರುವುದರಿಂದ ಅವರು ಅನುಭವಿಸಿದ ಅಧಿಕಾರ ಮತ್ತು ಸೌಲಭ್ಯಗಳನ್ನು ಹಿಂಪಡೆಯುವುದು ಸರ್ಕಾರದ ಕರ್ತವ್ಯವಾಗಿದೆ" ಎಂದು ಒತ್ತಾಯಿಸಿದರು.
ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಬಿಜೆಪಿ ಸದಾ ವಾಮಮಾರ್ಗದ ಮೂಲಕವೇ ಅಧಿಕಾರ ಹಿಡಿಯಲು ಯತ್ನಿಸುತ್ತದೆ ಎಂಬುದಕ್ಕೆ ಇತ್ತೀಚಿನ ಚುನಾವಣಾ ಬೆಳವಣಿಗೆಗಳೇ ಸಾಕ್ಷಿ. ರಾಜೇಗೌಡ ಮತ್ತು ಜೀವರಾಜ್ ಪ್ರಕರಣದಲ್ಲೂ ಬಿಜೆಪಿ ಆತುರದಿಂದ ಪ್ರಮಾಣಪತ್ರ ಪಡೆಯಲು ಯತ್ನಿಸಿತ್ತು. ಆದರೆ ನ್ಯಾಯಾಲಯದ ತಾಳ್ಮೆಯ ಪರಿಶೀಲನೆಯಿಂದ ಸತ್ಯ ಹೊರಬಂದಿದೆ" ಎಂದರು.
"ಹಾವು ತನ್ನ ಹೆಡೆಯ ಕೆಳಗೆ ಕಪ್ಪೆಗೆ ರಕ್ಷಣೆ ನೀಡಿದಂತೆ ನಟಿಸಿ ಕೊನೆಗೆ ಅದನ್ನು ನುಂಗಿಹಾಕುವ ರೀತಿಯಲ್ಲಿ, ಬಿಜೆಪಿ ಪಕ್ಷವು ದೇಶದ ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳನ್ನು ತನ್ನ ಹೊಟ್ಟೆಗೆ ಹಾಕಿಕೊಳ್ಳುತ್ತಿದೆ. ಹೈಕೋರ್ಟ್‌ನ ಈ ದಿಟ್ಟ ತೀರ್ಪಿನಿಂದಾಗಿ ದೇಶದ ನ್ಯಾಯಾಂಗ ವ್ಯವಸ್ಥೆಯ ಮೇಲೆ ಜನರಿಗೆ ಭರವಸೆ ಮತ್ತು ಆಶಾಭಾವನೆ ಮೂಡುವಂತಾಗಿದೆ" ಎಂದು ಭರತ್ ಕಿಡಿಕಾರಿದ್ದಾರೆ.
PublicNext
04/08/2026 07:52 pm