ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮರಕುಂಬಿಯಲ್ಲಿ ಶ್ರೀಚಕ್ರ ಸಮೇತ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವ ಭಕ್ತಿಭಾವದಿಂದ ಸಂಪನ್ನ

ಬೈಲಹೊಂಗಲ: ಸಮೀಪದ ಮರಕುಂಬಿ ಶ್ರೀಚಕ್ರ ಸಮೇತ ಶ್ರೀ ಚಾಮುಂಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಧರ್ಮದರ್ಶಿಗಳಾದ ಡಾ. ಜಿ.ಬಿ. ಮಲ್ಲೇಶ್ ಗುರೂಜಿಯವರ ಮಾರ್ಗದರ್ಶನದಲ್ಲಿ ಶ್ರೀಚಕ್ರ ಸಮೇತ ಚಾಮುಂಡೇಶ್ವರಿ ಅಮ್ಮನವರ ವರ್ಧಂತಿ ಮಹೋತ್ಸವವು ಮಂಗಳವಾರ ಅಪಾರ ಭಕ್ತಿಭಾವದಿಂದ ನೆರವೇರಿತು.

ಬೆಳಿಗ್ಗೆ 6.30ರಿಂದ ರಾತ್ರಿ 8.30ರವರೆಗೆ ವಿಶೇಷ ಪೂಜೆ, ಅಭಿಷೇಕ, ಅಲಂಕಾರ ಹಾಗೂ ವಿವಿಧ ಧಾರ್ಮಿಕ ಕೈಂಕರ್ಯಗಳು ಜರುಗಿದವು.

ಬೆಳಗ್ಗೆಯಿಂದಲೇ ಭಕ್ತರು ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು.

ಸಂಜೆ 6.30ಕ್ಕೆ ನಡೆದ ಪ್ರಾಕಾರೋತ್ಸವ (ನಿತ್ಯ ರಥೋತ್ಸವ) ವಿಶೇಷ ಆಕರ್ಷಣೆಯಾಗಿತ್ತು. ಶುಭ ಮುಹೂರ್ತದಲ್ಲಿ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ ತುಪ್ಪದ ಆರತಿ, ಮಂಗಳಾರತಿ ಹಾಗೂ ವಿಶೇಷ ಪೂಜೆಗಳನ್ನು ನೆರವೇರಿಸಲಾಯಿತು.

ನಂತರ ರಥವು ದೇವಸ್ಥಾನದಿಂದ ಅಶ್ವತ್ಥ ಕಟ್ಟೆಯವರೆಗೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಭಕ್ತರಿಗೆ ದರ್ಶನ ನೀಡಿತು.

ಸವದತ್ತಿ ತಹಶೀಲ್ದಾರ್ ಎಂ.ಎನ್. ಹೆಗ್ಗಣ್ಣವರ ಹಾಗೂ ಸರ್ವೇ ಸೂಪರ್‌ವೈಸರ್ ಸಂಜೀವಕುಮಾರ ಕಡ್ಲಾಸ್ಕರ್ ರಥಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಪ್ರಾಕಾರೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರು, ಸೇವಾ ಸಮಿತಿ ಸದಸ್ಯರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡು ಧಾರ್ಮಿಕ ಸಂಭ್ರಮಕ್ಕೆ ಸಾಕ್ಷಿಯಾದರು.

ಮಹೋತ್ಸವದ ಅಂಗವಾಗಿ ಭಕ್ತರು ಸಾಮೂಹಿಕ ಸಂಕಲ್ಪ ಕೈಗೊಂಡು ಅಕ್ಷತೆ ಹಾಗೂ ಪುಷ್ಪಗಳನ್ನು ದೇವಿಯ ಪಾದಾರವಿಂದಗಳಿಗೆ ಅರ್ಪಿಸಿದರು. ಪಂಚಸೇವೆ, ತಮಟೆ ವಾದ್ಯಗಳ ಮಂಗಳನಾದದೊಂದಿಗೆ ವಿಶೇಷ ಪೂಜೆಗಳು ನೆರವೇರಿದವು. ತಮ್ಮ ಕಷ್ಟ-ಕಾರ್ಪಣ್ಯಗಳು ನಿವಾರಣೆಯಾಗಲಿ, ಕುಟುಂಬದಲ್ಲಿ ಸುಖ-ಶಾಂತಿ, ಆರೋಗ್ಯ ಹಾಗೂ ಸಮೃದ್ಧಿ ನೆಲೆಸಲಿ ಎಂದು ದೇವಿಯ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು.

ದೇವಸ್ಥಾನದಲ್ಲಿ ಪ್ರತಿನಿತ್ಯದ ದಾಸೋಹ ವ್ಯವಸ್ಥೆಯ ಜೊತೆಗೆ ವರ್ಧಂತಿ ಮಹೋತ್ಸವದ ನಿಮಿತ್ತ ವಿಶೇಷ ಅನ್ನದಾಸೋಹವನ್ನು ಏರ್ಪಡಿಸಲಾಗಿತ್ತು.

Edited By : PublicNext Desk
Kshetra Samachara

Kshetra Samachara

04/08/2026 09:04 pm

Cinque Terre

5.66 K

Cinque Terre

0

ಸಂಬಂಧಿತ ಸುದ್ದಿ