ಹಾವೇರಿ: ಜಿಲ್ಲೆಯಾದ್ಯಂತ ಸುರಿಯುತ್ತಿರುವ ನಿರಂತರ ಮಳೆಯ ಅಬ್ಬರಕ್ಕೆ ಮಣ್ಣಿನ ಮನೆಯ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ 62 ವರ್ಷದ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾವೇರಿ ತಾಲೂಕಿನ ಮೇಲ್ಮುರಿ ಗ್ರಾಮದಲ್ಲಿ ಸಂಭವಿಸಿದೆ.
ಗಾಯಗೊಂಡ ಮಹಿಳೆಯನ್ನು ಮೇಲ್ಮುರಿ ಗ್ರಾಮದ ನಿವಾಸಿ ಮಹಾದೇವಕ್ಕ (62) ಎಂದು ಗುರುತಿಸಲಾಗಿದೆ.
ಅನಾಹುತ ಸಂಭವಿಸಿದ ವೇಳೆ ಮನೆಯೊಳಗಿದ್ದ ಮಹಾದೇವಕ್ಕ ಅವರ ಮೇಲೆ ಮೇಲ್ಛಾವಣಿಯ ಮಣ್ಣು ಬಿದ್ದಿದ್ದು, ಅವರು ಕೆಲಕಾಲ ಮಣ್ಣಿನ ಅಡಿಯಲ್ಲಿ ಸಿಲುಕಿಕೊಂಡಿದ್ದರು. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರು ಸಮಯಪ್ರಜ್ಞೆ ಮೆರೆದು ರಕ್ಷಣಾ ಕಾರ್ಯ ನಡೆಸಿ ಮಹಿಳೆಯನ್ನು ಹೊರತೆಗೆದಿದ್ದಾರೆ. ಬಳಿಕ ಅವರನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಜಿಲ್ಲೆಯಲ್ಲಿ ಮಳೆಯ ಆರ್ಭಟ ಮುಂದುವರಿದಿರುವುದರಿಂದ ಹಳೆಯ ಮಣ್ಣಿನ ಮನೆಗಳಲ್ಲಿ ವಾಸಿಸುತ್ತಿರುವ ಜನರಲ್ಲಿ ಭೀತಿ ಆವರಿಸಿದೆ. ಅಪಾಯಕಾರಿ ಸ್ಥಿತಿಯಲ್ಲಿರುವ ಮನೆಗಳಲ್ಲಿ ವಾಸಿಸುವ ಕುಟುಂಬಗಳು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತಾಲೂಕು ಆಡಳಿತ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
PublicNext
04/08/2026 10:26 pm
LOADING...