ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪೀಣ್ಯ ಇಂಡಸ್‌ಇಂಡ್ ಬ್ಯಾಂಕ್‌ನಲ್ಲಿ 1.5 ಕೋಟಿ ಗೋಲ್ಡ್ ಲೋನ್ ಫ್ರಾಡ್: ಉದ್ಯಮಿಗೂ ಉಂಡೆನಾಮ ಹಾಕಿದ ಲೂಟಿಕೋರರು

ಬೆಂಗಳೂರು : ಕೆಲಸ ಕೊಟ್ಟ ಸಂಸ್ಥೆ ಎಂದರೆ ಅದು ದೇವಸ್ಥಾನವಿದ್ದಂತೆ. ಅನ್ನ ಹಾಕಿದ ಸಂಸ್ಥೆಗೆ ವಂಚಿಸುವುದೆಂದರೆ ಅದು ಹೆತ್ತ ತಾಯಿಗೆ ದ್ರೋಹ ಬಗೆದಂತೆ. ಆದರೆ ಇಲ್ಲೊಬ್ಬ ಆಸಾಮಿ ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್‌ಗೆ ನಕಲಿ ಖಾತೆ ಹಾಗೂ ನಕಲಿ ಚಿನ್ನದ ಮೂಲಕ ಕೋಟಿ ಕೋಟಿ ರೂಪಾಯಿ ವಂಚಿಸಿದ್ದಾನೆ. ಬ್ಯಾಂಕ್‌ನಲ್ಲಿ ಸಿಕ್ಕಿಬಿದ್ದಾಗ ಹಣದ ಆಸೆ ತೋರಿಸಿ ಉದ್ಯಮಿಯೊಬ್ಬರಿಗೂ ಉಂಡೆನಾಮ ಹಾಕಿದ್ದಾನೆ. ಆ ಕುರಿತ ಆಸಕ್ತಿದಾಯಕ ವರದಿ ಇಲ್ಲಿದೆ.

ಅದು ಪೀಣ್ಯದ ಇಂಡಸ್‌ಇಂಡ್ ಬ್ಯಾಂಕ್. ಇತ್ತೀಚೆಗೆ ಎಲ್ಲಾ ಬ್ಯಾಂಕ್‌ಗಳಲ್ಲಿ ಗೋಲ್ಡ್ ಲೋನ್ ನೀಡುವುದು ಸಾಮಾನ್ಯ. ಇದೇ ಇಂಡಸ್‌ಇಂಡ್ ಬ್ಯಾಂಕ್‌ನ ಗೋಲ್ಡ್ ಲೋನ್ ವಿಭಾಗದಲ್ಲಿ ಅಪ್ರೈಸರ್ ಆಗಿದ್ದ ಜಗದೀಶ್ ಎಂಬಾತ, ಕೋಟಿ ಕೋಟಿ ಹಣ ಮಾಡಲು ತನಗೆ ಅನ್ನ ಹಾಕಿದ್ದ ಬ್ಯಾಂಕ್‌ಗೇ ಹಳ್ಳ ತೋಡಲು ಮುಂದಾಗಿದ್ದ. ಇದಕ್ಕಾಗಿ ತನ್ನ ಸ್ನೇಹಿತರಾದ ನಾಗೇಶ್ ಮತ್ತು ಶಶಿಧರ್‌ನನ್ನು ಸಹ ಜೊತೆಗೆ ಸೇರಿಸಿಕೊಂಡಿದ್ದ. ಮೂವರೂ ಸೇರಿ ಬ್ಯಾಂಕ್‌ನಿಂದ ಹಣ ಪಡೆಯಲು ಸಖತ್ ಮಾಸ್ಟರ್ ಪ್ಲಾನ್ ಮಾಡಿದ್ದರು.

ಅದರಂತೆ ನಾಗೇಶ್ ತನ್ನ ಸ್ನೇಹಿತರು ಮತ್ತು ಪರಿಚಯಸ್ಥರನ್ನು ಬ್ಯಾಂಕ್‌ಗೆ ಕರೆತಂದು ನಕಲಿ ಖಾತೆಗಳನ್ನು ತೆರೆಸುತ್ತಿದ್ದ. 'ನಮ್ಮ ಒಡವೆ ಇದೆ, ಅದನ್ನು ಅಡಮಾನ ಇಡಬೇಕು' ಎಂದು ಹೇಳಿ ಅವರಿಗೆ ಒಂದಷ್ಟು ಪುಡಿಗಾಸು ಕೊಟ್ಟು ಖಾತೆ ತೆರೆಸುತ್ತಿದ್ದ. ಇದಾದ ಮೇಲೆ ಅಪ್ರೈಸರ್ ಜಗದೀಶ್‌ನ ಆಟ ಶುರುವಾಗುತ್ತಿತ್ತು. ಇದೇ ಜಗದೀಶ್ ನಾಗೇಶ್‌ಗೆ ನಕಲಿ ಒಡವೆಗಳನ್ನು ನೀಡುತ್ತಿದ್ದ. ಇದೇ ಒಡವೆಗಳನ್ನು ನಾಗೇಶ್ ಖಾತೆದಾರರ ಮೂಲಕ ಬ್ಯಾಂಕ್‌ನಲ್ಲಿ ಅಡವಿಡಿಸಲು ಮುಂದಾಗುತ್ತಿದ್ದ. ಅಪ್ರೈಸರ್ ಜಗದೀಶ್ ಚಿನ್ನ ಪರಿಶೀಲಿಸುವ ಕೆಲಸ ಮಾಡುತ್ತಿದ್ದುದರಿಂದ, ನಕಲಿ ಒಡವೆಯಲ್ಲಿ ಕೊಂಡಿ ಭಾಗ ಮಾತ್ರ ಚಿನ್ನ ಇರುವಂತೆ ಮಾಡಿ, ಒಡವೆ ಅಡವಿಟ್ಟು ಹಣ ಪಡೆದುಕೊಳ್ಳುತ್ತಿದ್ದರು.

ಹೀಗೆ ಬ್ಯಾಂಕ್‌ನಿಂದ ನಾಗೇಶ್ ಪಡೆದುಕೊಳ್ಳುತ್ತಿದ್ದ ಹಣದಲ್ಲಿ, ಪ್ರತಿ ಹತ್ತು ಲಕ್ಷ ರೂಪಾಯಿಗೆ 2.5 ಲಕ್ಷ ರೂಪಾಯಿಯಂತೆ ಅಪ್ರೈಸರ್ ಜಗದೀಶ್ ಪಡೆಯುತ್ತಿದ್ದ. ಇದೇ ರೀತಿ ಸುಮಾರು 15 ನಕಲಿ ಖಾತೆಗಳನ್ನು ಸೃಷ್ಟಿಸಿ, ಸುಮಾರು 1.5 ಕೋಟಿ ರೂಪಾಯಿ ಹಣವನ್ನು ಬ್ಯಾಂಕ್‌ಗೆ ವಂಚಿಸಿದ್ದಾರೆ.

ಆದರೆ, ಈ ವಂಚಕರ ಆಟ ಬ್ಯಾಂಕ್ ಆಡಿಟಿಂಗ್ ವೇಳೆ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ತಕ್ಷಣವೇ ಅಪ್ರೈಸರ್ ಜಗದೀಶ್‌ಗೆ, "ಬ್ಯಾಂಕ್‌ಗೆ ಹಣ ಪಾವತಿಸು, ಇಲ್ಲವಾದರೆ ಜೈಲಿಗೆ ಕಳುಹಿಸುತ್ತೇವೆ" ಎಂದು ಗದರಿದ್ದಾರೆ. ಈ ವೇಳೆ ಮತ್ತೆ ವಂಚನೆಯ ಬಲೆ ಹೆಣೆದ ಜಗದೀಶ್, ನಾಗೇಶ್ ಮತ್ತು ಶಶಿಧರ್, ಉದ್ಯಮಿ ಜಗದೀಶ್ ಎಂಬುವವರನ್ನು ಪುಸಲಾಯಿಸಿದ್ದಾರೆ. "ಬ್ಯಾಂಕ್‌ನಲ್ಲಿ ಕೆಲವರು ಅಡವಿಟ್ಟಿರುವ ಚಿನ್ನ ಹರಾಜಿಗೆ ಬಂದಿದೆ. ಪ್ರತಿ ಗ್ರಾಂಗೆ 9,000 ರೂಪಾಯಿ ನೀಡಿದರೆ ಅದನ್ನು ಬಿಡಿಸಿ, ಹೊರಗೆ ಪ್ರತಿ ಗ್ರಾಂಗೆ 13,000 ರೂಪಾಯಿಯಂತೆ ಮಾರಾಟ ಮಾಡಬಹುದು" ಎಂದು ನಂಬಿಸಿ, ಉದ್ಯಮಿ ಜಗದೀಶ್ ಅವರಿಂದ 1.5 ಕೋಟಿ ರೂಪಾಯಿ ಹಣ ಪಡೆದು ಬ್ಯಾಂಕ್‌ಗೆ ಪಾವತಿಸಿ, ಆರೋಪಿಗಳು ಕೈಗೆ ಸಿಗದೆ ಪರಾರಿಯಾಗಿದ್ದಾರೆ.

ಇತ್ತ ಹಣ ಕಳೆದುಕೊಂಡ ಉದ್ಯಮಿ ಜಗದೀಶ್ ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ ಜಗದೀಶ್, ನಾಗೇಶ್ ಮತ್ತು ಶಶಿಧರ್ ಎಂಬುವವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Edited By : Somashekar
PublicNext

PublicNext

05/08/2026 03:55 pm

Cinque Terre

5.35 K

Cinque Terre

0

ಸಂಬಂಧಿತ ಸುದ್ದಿ