ಮಂಗಳೂರು: ರಾಜ್ಯದಲ್ಲಿ ಪರೀಕ್ಷಾ ಅಕ್ರಮಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಪರೀಕ್ಷಾ ಗೊಂದಲಗಳು ಸರಣಿ ಮಾದರಿಯಲ್ಲಿ ನಡೆಯುತ್ತಿವೆ. "ಕೇಂದ್ರದಲ್ಲಿ ನೀಟ್ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾದರೆ ಪ್ರಧಾನಮಂತ್ರಿ ಮೋದಿಯವರು ಹೊಣೆ, ಆದರೆ ರಾಜ್ಯದಲ್ಲಿ ಪರೀಕ್ಷೆ ಗೊಂದಲಗಳಾದಲ್ಲಿ ಅಧಿಕಾರಿಗಳು ಹೊಣೆ ಎನ್ನುವ ಇಬ್ಬಗೆಯ ನೀತಿಯನ್ನು ಕಾಂಗ್ರೆಸ್ ಸರ್ಕಾರ ಅನುಸರಿಸುತ್ತಿದೆ. ಕೆಪಿಎಸ್‌ಸಿ ಪರೀಕ್ಷೆಯಲ್ಲಿ ಭ್ರಷ್ಟಾಚಾರ ಮಾಡಲೇಬೇಕೆಂಬ ಹುಳುಕನ್ನು ಇಟ್ಟುಕೊಂಡು ಸರ್ಕಾರ ಕೆಲಸ ಮಾಡುತ್ತಿದೆ" ಎಂದು ಶಾಸಕ ಡಾ. ವೈ. ಭರತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಲಕ್ಷಾಂತರ ನಿರುದ್ಯೋಗಿ ಯುವಕರ ಭವಿಷ್ಯದ ಜೊತೆ ಈ ಸರ್ಕಾರ ಚೆಲ್ಲಾಟವಾಡುತ್ತಿದೆ. ಕೆಇಎ ಮತ್ತು ಕೆಪಿಎಸ್‌ಸಿ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ನಡೆದಿರುವ ಎಲ್ಲಾ ಪರೀಕ್ಷಾ ಹಗರಣಗಳನ್ನು ತಕ್ಷಣವೇ ಸಿಬಿಐ ತನಿಖೆಗೆ ಒಪ್ಪಿಸಬೇಕು. ಆಡಳಿತ ನಡೆಸಲು ವಿಫಲವಾಗಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು" ಎಂದು ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಆಗ್ರಹಿಸಿದರು.
"ಪ್ರಿಯಾಂಕ್ ಖರ್ಗೆಯವರಂತಹ ಬುದ್ಧಿಗೇಡಿ ಮಂತ್ರಿಯನ್ನು ನಾನು ಈವರೆಗೆ ನೋಡಿಲ್ಲ. ಅವರ ಇಲಾಖೆಯಲ್ಲೇ ಮಹಾ ಭ್ರಷ್ಟಾಚಾರ ಪ್ರಕರಣಗಳಿವೆ. ಪ್ರಿಯಾಂಕ್ ಖರ್ಗೆಯವರು ರಾಜ್ಯದ ಸಮಸ್ಯೆಗಳಿಗೆ ಸ್ಪಂದಿಸುವುದು ಬಿಟ್ಟು ಡೆಲ್ಲಿ ರಾಜಕಾರಣ ಮಾಡಲು ಹೊರಟಿದ್ದಾರೆ. ಅವರಿಗೆ 'ಸರ್ವಜ್ಞ ಸಿಂಡ್ರೋಮ್' ಇದ್ದು, ಇಡೀ ಜಗತ್ತಿನ ಪ್ರತಿಯೊಂದು ವಿಷಯವೂ ತನಗೊಬ್ಬನಿಗೆ ಮಾತ್ರ ಗೊತ್ತು, ಜಗತ್ತಿನ ಎಲ್ಲಾ ಸಮಸ್ಯೆಗಳಿಗೂ ತನ್ನ ಬಳಿ ಮಾತ್ರವೇ ಪರಿಹಾರವಿದೆ ಎಂಬ ಭ್ರಮೆಯಲ್ಲಿ ಅವರು ಬದುಕುತ್ತಿದ್ದಾರೆ. ವಿಧಾನಸಭೆಯ ಅಧಿವೇಶನ ನಡೆಯುವಾಗ ಯಾವುದೇ ಸಚಿವರಿಗೆ ಅಥವಾ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಿದರೂ, ಪ್ರಿಯಾಂಕ್ ಖರ್ಗೆ ಅವರೇ ಎದ್ದು ನಿಂತು ಉತ್ತರಿಸಲು ಮುಂದಾಗುತ್ತಾರೆ" ಎಂದು ಲೇವಡಿ ಮಾಡಿದರು.
"ಇತ್ತೀಚೆಗೆ ರಾಜ್ಯದಲ್ಲಿ ನಡೆದ ಕೆಇಎ, ಕೆಪಿಎಸ್‌ಸಿ, ಎಸ್‌ಎಸ್‌ಎಲ್‌ಸಿ, ಎಇಇ, ಪೊಲೀಸ್ ಇಲಾಖೆಯ ಪರೀಕ್ಷೆಗಳು ಗೊಂದಲದ ಗೂಡಾಗಿವೆ. ಕೇಂದ್ರ ಸರ್ಕಾರ ನಡೆಸುವ ನೀಟ್ ಪರೀಕ್ಷೆಯಲ್ಲಿ ದೇಶದ ಯಾವುದೋ ಒಂದು ಮೂಲೆಯಲ್ಲಿ ಸಣ್ಣ ತಾಂತ್ರಿಕ ದೋಷ ಅಥವಾ ಲೋಪ ಕಂಡುಬಂದರೂ ಇಡೀ ದೇಶಾದ್ಯಂತ ಬೀದಿಗಿಳಿದು ರಾಜೀನಾಮೆಗೆ ಆಗ್ರಹಿಸುವ ಕಾಂಗ್ರೆಸ್ ನಾಯಕರು, ಈಗ ರಾಜ್ಯದ ಕೆಪಿಎಸ್‌ಸಿ, ಕೆಇಎ, ಪಿಎಸ್‌ಐ, ಕೃಷಿ ಇಲಾಖೆ ಹಾಗೂ ಕೆಇಬಿ ಪರೀಕ್ಷೆಗಳಲ್ಲಿ ಸರಣಿ ಹಗರಣಗಳು ನಡೆಯುತ್ತಿದ್ದರೂ ಮೌನಕ್ಕೆ ಶರಣಾಗಿದ್ದಾರೆ. ರಾಜ್ಯದಲ್ಲಿ ತಪ್ಪುಗಳು ಸಂಭವಿಸಿದಾಗ ಮುಖ್ಯಮಂತ್ರಿಗಳಾಗಲಿ ಅಥವಾ ಸಚಿವರಾಗಲಿ ಜವಾಬ್ದಾರಿ ಹೊರದೆ, ಕೇವಲ ಕೆಳಮಟ್ಟದ ಅಧಿಕಾರಿಗಳ ಮೇಲೆ ಗೂಬೆ ಕೂರಿಸಿ ಅಮಾನತು ಮಾಡುವ ನಾಟಕವಾಡಿ ಕೈತೊಳೆದುಕೊಳ್ಳುತ್ತಿದ್ದಾರೆ" ಎಂದು ಕಿಡಿಕಾರಿದರು.
"ರಾಜ್ಯದ ಕೆಇಎ, ಕೆಪಿಎಸ್‌ಸಿ ಸೇರಿದಂತೆ ಇದುವರೆಗೆ ನಡೆದಿರುವ ಎಲ್ಲಾ ಇಲಾಖೆಗಳ ಪರೀಕ್ಷಾ ಅಕ್ರಮ, ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ಭ್ರಷ್ಟಾಚಾರದ ಜಾಲದ ಮೂಲವನ್ನು ಪತ್ತೆಹಚ್ಚಲು ಪ್ರಕರಣವನ್ನು ತಕ್ಷಣವೇ ಸಿಬಿಐ ತನಿಖೆಗೆ ಒಪ್ಪಿಸಬೇಕು. ಯಾವ ಇಲಾಖೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಭ್ರಷ್ಟಾಚಾರ ಹಾಗೂ ಅಕ್ರಮಗಳಾಗಿವೆಯೋ, ಆಯಾ ಇಲಾಖೆಯ ಸಚಿವರುಗಳು ಕೂಡ ನೈತಿಕ ಹೊಣೆ ಹೊತ್ತು ಅಧಿಕಾರದಿಂದ ಕೆಳಗಿಳಿಯಬೇಕು" ಎಂದು ಶಾಸಕರು ಒತ್ತಾಯಿಸಿದರು.
PublicNext
05/08/2026 05:01 pm