ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

32,000 ಒಳಗಿನ ಆದಾಯ ಪ್ರಮಾಣಪತ್ರ ಸುತ್ತೋಲೆ ವಾಪಸ್ ಪಡೆಯುವಂತೆ ಒತ್ತಾಯ

ಶಿವಮೊಗ್ಗ : ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳಾಗಲು ವಾರ್ಷಿಕ 32,000 ರೂ.ಗಳ ಒಳಗಿನ ಆದಾಯ ಪ್ರಮಾಣಪತ್ರ ನೀಡಬೇಕೆಂಬ ಸರ್ಕಾರಿ ಸುತ್ತೋಲೆಯನ್ನು ತಕ್ಷಣವೇ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.

ಸರ್ಕಾರ ಸಾಮಾಜಿಕ ಭದ್ರತಾ ಯೋಜನೆಗಳನ್ನು ಪಡೆಯಲು ವಾರ್ಷಿಕ 32,000 ರೂ.ಗಳೊಳಗಿನ ಆದಾಯ ಇರಬೇಕು ಹಾಗೂ ಸರ್ಕಾರಿ ನ್ಯಾಯಬೆಲೆ ಅಂಗಡಿಗಳಿಗೆ ಜಾತಿ ಪ್ರಮಾಣಪತ್ರ ನೀಡಬೇಕು ಎಂಬ ಎರಡು ಆದೇಶಗಳನ್ನು ಹೊರಡಿಸಿದೆ. ಈ ಆದೇಶಗಳು ಅವೈಜ್ಞಾನಿಕವಾಗಿದ್ದು ಬಡವರ ವಿರೋಧಿಯಾಗಿವೆ. ಈ ಎರಡೂ ಆದೇಶಗಳನ್ನು ವಿರೋಧಿಸಿ ತಾಲ್ಲೂಕು ಕಚೇರಿ ಮುಂದೆ ಟ್ರಸ್ಟ್ ವತಿಯಿಂದ ಆದೇಶದ ಪ್ರತಿಗೆ ಬೆಂಕಿ ಹಚ್ಚಿ, ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಲಾಗಿತ್ತು. ಆದರೂ ಈ ಆದೇಶವನ್ನು ಸರ್ಕಾರ ವಾಪಸ್ ಪಡೆಯದಿರುವುದಾಗಿ ಪ್ರತಿಭಟನಾಕಾರರು ದೂರಿದರು.

ರಾಷ್ಟ್ರೀಯ ವೃದ್ಧಾಪ್ಯ ವೇತನ, ವಿಧವಾ ಪಿಂಚಣಿ ವೇತನ, ವಿಕಲಚೇತನರ ಪಿಂಚಣಿ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ರಾಷ್ಟ್ರೀಯ ಕುಟುಂಬ ನೆರವು, ಮನಸ್ವಿನಿ ಯೋಜನೆ, ಮೈತ್ರಿ ಯೋಜನೆ ಪಿಂಚಣಿ ಸೇರಿದಂತೆ ಹಲವು ಯೋಜನೆಗಳನ್ನು ಪಡೆಯಲು ವಾರ್ಷಿಕ 32,000 ರೂ.ಗಳೊಳಗಿನ ಆದಾಯ ಇರಬೇಕು ಎಂಬ ಆದೇಶದ ಹಿನ್ನೆಲೆ ಕಳೆದ ನಾಲ್ಕು ತಿಂಗಳಿನಿಂದ ಈ ವೇತನಗಳನ್ನು ನಿಲ್ಲಿಸಲಾಗಿದೆ ಎಂದು ದೂರಿದರು.

ಜೊತೆಗೆ ಕಡುಬಡವರ ಬಿಪಿಎಲ್ ಕಾರ್ಡ್ ಹೊಂದಿರುವವರಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಜಾತಿ ಪ್ರಮಾಣಪತ್ರ ಕೇಳುವುದು ಕೂಡ ಅವೈಜ್ಞಾನಿಕವಾಗಿದೆ. ಇದರಿಂದ ಬಡವರಿಗೆ ಪಡಿತರ ಸಿಗುತ್ತಿಲ್ಲ. ಅಂಗಡಿ ಮಾಲೀಕರು ಅಮಾಯಕ ಫಲಾನುಭವಿಗಳಿಗೆ ಅನಗತ್ಯ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದರು.

ಆದ್ದರಿಂದ ಸರ್ಕಾರ ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳ ವಾರ್ಷಿಕ ಆದಾಯ ಮಿತಿಯನ್ನು 32,000 ರೂ.ಗಳಿಂದ ಕನಿಷ್ಠ 1.20 ಲಕ್ಷ ರೂ.ಗಳಿಗೆ ಏರಿಸಬೇಕು. ನ್ಯಾಯಬೆಲೆ ಅಂಗಡಿಗಳಲ್ಲಿ ಜಾತಿ ಹಾಗೂ ಆದಾಯ ಪ್ರಮಾಣಪತ್ರ ನೀಡಬೇಕೆಂಬ ಆದೇಶವನ್ನು ಕೂಡಲೇ ವಾಪಸ್ ಪಡೆಯಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಅಧ್ಯಯನ ಕೇಂದ್ರ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಹೆಚ್.ಎಂ. ಸಂಗಯ್ಯ, ನಂಜುಂಡಪ್ಪ, ಶಿವಣ್ಣ, ಶಂಕರನಾಯ್ಕ, ಹೆಚ್. ರಾಮ, ಎಸ್.ಪಿ. ಶಿವಣ್ಣ, ಆದಿಶೇಷ, ಚಂದ್ರಪ್ಪ, ಆಲಿಂಖಾನ್, ಕೋಡ್ಲು ಶ್ರೀಧರ್, ಆರ್. ಕಣ್ಣನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

06/08/2026 09:30 am

Cinque Terre

500

Cinque Terre

0

ಸಂಬಂಧಿತ ಸುದ್ದಿ