ಶಿವಮೊಗ್ಗ : ಸೊರಬ ತಾಲೂಕಿನ ಉದ್ರಿ ಗ್ರಾಮ ಸಮೀಪದ ವಡ್ಡಿಗೆರೆ ಗ್ರಾಮದಲ್ಲಿ ಅಪರೂಪದ ಹಾಗೂ ವಿಚಿತ್ರ ದೈಹಿಕ ಲಕ್ಷಣಗಳನ್ನು ಹೊಂದಿದ ಆಡಿನ ಮರಿಯೊಂದು ಜನಿಸಿದ್ದು, ಗ್ರಾಮಸ್ಥರಲ್ಲಿ ತೀವ್ರ ಕುತೂಹಲ ಮತ್ತು ಅಚ್ಚರಿ ಮೂಡಿಸಿದೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಸುತ್ತಮುತ್ತಲಿನ ಗ್ರಾಮಗಳಿಂದಲೂ ಜನರು ಆಗಮಿಸಿ ವಿಚಿತ್ರ ಮರಿಯನ್ನು ಕಣ್ತುಂಬಿಕೊಂಡರು.
ಉದ್ರಿ ವಡ್ಡಿಗೆರೆ ಗ್ರಾಮದ ನಿವಾಸಿಗಳಾದ ಕಾಳಿಂಗಪ್ಪ ಬಾವಿಕಟ್ಟೇರ ಮತ್ತು ಪುಟ್ಟಮ್ಮ ದಂಪತಿ ಕೃಷಿಯ ಜೊತೆಗೆ ಕುರಿ ಸಾಕಾಣಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಸಾಕಾಣಿಕೆಯಲ್ಲಿದ್ದ ಆಡಿಗೆ ಅವಳಿ ಮರಿಗಳು ಜನಿಸಬಹುದು ಎಂಬ ನಿರೀಕ್ಷೆಯಲ್ಲಿದ್ದ ಅವರು, ಹೆರಿಗೆ ಬಳಿಕ ಒಂದೇ ದೇಹದಲ್ಲಿ ಅಪರೂಪದ ದೈಹಿಕ ವೈಶಿಷ್ಟ್ಯಗಳನ್ನು ಹೊಂದಿದ ಮರಿ ಜನಿಸಿರುವುದನ್ನು ಕಂಡು ಆಶ್ಚರ್ಯಚಕಿತರಾದರು.
ಜನಿಸಿದ ಆಡಿನ ಮರಿಗೆ ಎಂಟು ಕಾಲುಗಳು, ಮೂರು ಕಿವಿಗಳು, ಎರಡು ಬಾಲಗಳು ಹಾಗೂ ಎರಡು ನಾಲಿಗೆಗಳು ಇದ್ದವು. ದೇಹದ ರಚನೆಯೂ ಸಾಮಾನ್ಯ ಮರಿಗಳಿಗಿಂತ ಭಿನ್ನವಾಗಿದ್ದು, ಈ ಅಪರೂಪದ ಜನನ ಗ್ರಾಮಸ್ಥರಲ್ಲಿ ಆಶ್ಚರ್ಯ ಮೂಡಿಸಿದೆ. ಇಂತಹ ಜನನ ಅತ್ಯಂತ ವಿರಳವಾಗಿರುವುದರಿಂದ ಸುದ್ದಿ ಕ್ಷಣಾರ್ಧದಲ್ಲೇ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹರಡಿತು. ವಿಚಿತ್ರವಾಗಿ ಜನಿಸಿದ ಈ ಆಡಿನ ಮರಿ ಕೆಲಕಾಲ ಜೀವಂತವಾಗಿದ್ದು, ನಂತರ ಸಾವನ್ನಪ್ಪಿದೆ.
ಮರಿಯನ್ನು ನೋಡಲು ಉದ್ರಿ ವಡ್ಡಿಗೆರೆ ಗ್ರಾಮಸ್ಥರಷ್ಟೇ ಅಲ್ಲದೆ ಸಮೀಪದ ಗ್ರಾಮಗಳ ಜನರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು. ಹಲವರು ಮೊಬೈಲ್‌ಗಳಲ್ಲಿ ಚಿತ್ರ ಹಾಗೂ ವಿಡಿಯೊಗಳನ್ನು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡರು.
ಇಂತಹ ಅಪರೂಪದ ಜನನಗಳು ಭ್ರೂಣದ ಬೆಳವಣಿಗೆಯ ಹಂತದಲ್ಲಿ ಉಂಟಾಗುವ ದೈಹಿಕ ವೈಪರೀತ್ಯಗಳು ಅಥವಾ ಜನ್ಮಜಾತ ಬೆಳವಣಿಗೆಯ ಅಸಹಜತೆಗಳಿಂದ ಸಂಭವಿಸಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಇಂತಹ ಮರಿಗಳು ಸಾಮಾನ್ಯವಾಗಿ ಹೆಚ್ಚು ಕಾಲ ಬದುಕುವುದು ವಿರಳ ಎನ್ನಲಾಗುತ್ತದೆ.
ಈ ಅಪರೂಪದ ಘಟನೆ ಉದ್ರಿ ವಡ್ಡಿಗೆರೆ ಗ್ರಾಮದಲ್ಲಿ ದಿನವಿಡೀ ಚರ್ಚೆಗೆ ಗ್ರಾಸವಾಗಿದ್ದು, ಪ್ರಕೃತಿಯ ವಿಚಿತ್ರ ಸೃಷ್ಟಿಯೊಂದಾಗಿ ಜನರ ಗಮನ ಸೆಳೆದಿದೆ.
PublicNext
06/08/2026 03:31 pm