ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಬರದ ನಾಡಿನತ್ತ ಹರಿದು ಬರ್ತಿದ್ದಾಳೆ ಭದ್ರೆ; ಟ್ರಯಲ್ ರನ್ ಆರಂಭ

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆ ಕಳೆದ ಹಲವು ವರ್ಷಗಳಿಂದ ಶಾಶ್ವತ ಬರ ಪೀಡಿತ ಪ್ರದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡಿತ್ತು. ಇದೇ ಕಾರಣಕ್ಕೆ ಬಯಲುಸೀಮೆಯ ಬರಡು ಭೂಮಿಗೆ ಭದ್ರೆ ನೀರು ಹರಿಸಲು, ಜಿಲ್ಲೆಯ ರೈತರು ಕನಸು ಕಂಡಿದ್ದರು. ಇದಕ್ಕಾಗಿಯೇ ಕಳೆದ ಐದಾರು ದಶಕಗಳ ಹಿಂದೆ ಜಿಲ್ಲೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಹೋರಾಟದ ಕಿಚ್ಚು ಹಚ್ಚಿದ್ದರು. ಜಿಲ್ಲೆಯ ರೈತರು, ಪತ್ರಕರ್ತರು, ಮಠಾಧೀಶರು, ವಿವಿಧ ಸಂಘ-ಸಂಸ್ಥೆಗಳು ಸೇರಿದಂತೆ ಸಾವಿರಾರು ಮಂದಿ ಹೋರಾಟಗಾರರು ಆಳುವ ಸರ್ಕಾರಗಳ ಮೇಲೆ ಒತ್ತಡ ಏರಿದ್ದರು.

ಆದ್ರೆ ಕೊನೆಗೂ 2002 ರಲ್ಲಿ SM ಕೃಷ್ಣ ನೇತೃತ್ವದ ಸರ್ಕಾರ ಭದ್ರಾ ಮೇಲ್ದಂಡೆ ಯೋಜನೆಗೆ 2 ಸಾವಿರದ 16 ಕೋಟಿ ಹಣ ಬಿಡುಗಡೆ ಮಾಡಿತ್ತು. ಅಲ್ಲಿಂದ ಇಲ್ಲಿಯವರೆಗೆ ಒಟ್ಟು 21 ಸಾವಿರದ 500 ಕೋಟಿ ಹಣ ಯೋಜನಾ ವೆಚ್ಚವಾಗಿದೆ. ಅಲ್ಲದೇ ತುಂಗಾ ಡ್ಯಾಂನಿಂದ 17.4 TMC ಹಾಗೂ ಭದ್ರಾ ಡ್ಯಾಂ 12.5 TMC ಸೇರಿ ಒಟ್ಟು 29.9 TMC ನೀರು ಹಂಚಿಕೆ ಮಾಡಲಾಗಿತ್ತು. ಇನ್ನೂ 4 ಜಿಲ್ಲೆಯ 12 ತಾಲ್ಲೂಕಿನ 2 ಲಕ್ಷದ 25 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜನೆ ಸಿದ್ಧವಾಗಿತ್ತು. ಆದ್ರೆ ಇದೀಗ ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಸರ್ಕಾರ ಚಿತ್ರದುರ್ಗ ಶಾಲಾ ಕಾಲುವೆ ಮೂಲಕ ಪ್ರಾಯೋಗಿಕವಾಗಿ ನೀರು ಹರಿಸಿದ್ದು, ಹತ್ತಾರು ದಶಕಗಳ ಹೋರಾಟಕ್ಕೆ ಫಲ ಸಿಕ್ಕಂತಾಗಿದೆ.

ಶಿವಮೊಗ್ಗ ಜಿಲ್ಲೆಯ ಲಕ್ಕವಳ್ಳಿ ಅಣೆಕಟ್ಟು ಬಳಿ ಚಿತ್ರದುರ್ಗ ಜಿಲ್ಲಾ ಮಂತ್ರಿ ಟಿ.ರಘುಮೂರ್ತಿ ಭದ್ರೆ ನೀರು ಹರಿಸಲು ಚಾಲನೆ ನೀಡಿದ್ದು, ಬರದ ನಾಡಿನ ಜನರಲ್ಲಿ ಸಂತಸ ಮನೆ ಮಾಡಿದೆ. ಇನ್ನೂ ಇದೇ ವೇಳೆ ಶಾಸಕರಾದ ಎಂ.ಚಂದ್ರಪ್ಪ, ಕೆ.ಸಿ. ವೀರೇಂದ್ರ ಪಪ್ಪಿ, ಟಿಬಿ ಜಯಚಂದ್ರ, ಬಿಜಿ ಗೋವಿಂದಪ್ಪ ಸೇರಿ ಹಲವರು ಸಂತಸ ವ್ಯಕ್ತಪಡಿಸಿದ್ದಾರೆ.

ಇನ್ನೂ ಇಂದಿನಿಂದ ಕೋಟೆನಾಡು ಚಿತ್ರದುರ್ಗದತ್ತ ಭದ್ರೆ ಹರಿದು ಬರ್ತಿದ್ದು, ಗೋನೂರು ಕೆರೆವರೆಗೂ ಟ್ರಯಲ್ ರನ್ ಆರಂಭವಾಗಿದೆ. ಸುಮಾರು 110 ಕಿಲೋಮೀಟರ್ ದೂರಕ್ಕೆ ಭದ್ರೆ ಹರಿಯುತ್ತಿದ್ದು, ಹತ್ತಾರು ದಶಕಗಳ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ. ಇದರಿಂದ ಚಿತ್ರದುರ್ಗ ಜಿಲ್ಲೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಶ್ರಮಿಸಿದ್ದಕ್ಕೆ ಇಂದು ಫಲ ಸಿಕ್ಕಂತಾಗಿದ್ದು, ದುರ್ಗದ ಜನರು ನೀರು ಕಂಡು ಸಂಭ್ರಮಿಸಿದ್ದಾರೆ. ಇನ್ನೂ ಚಿತ್ರದುರ್ಗ ಶಾಲಾ ಕಾಲುವೆ ಮೂಲಕ ಬರದ ಊರಿಗೆ ಭದ್ರೆ ಹರಿದು ಬರುತ್ತಿದ್ದು, ಇನ್ನೊಂದು ವಾರಕ್ಕೆ ಗೋನೂರು ಕೆರೆಗೆ ಬಂದು ತಲುಪಲಿದೆ.

ಈ ನಡುವೆ ಶಾಸಕರಾದ ಟಿಬಿ ಜಯಚಂದ್ರ ಮಾತನಾಡಿ, ಕೇಂದ್ರ ಸರ್ಕಾರ ಘೋಷಣೆ ಮಾಡಿದ್ದ 5300 ಕೋಟಿ ಹಣ ಬಿಡುಗಡೆ ಮಾಡಿದ್ರೆ, 2028ರ ಒಳಗೆ ಯೋಜನೆ ಸಂಪೂರ್ಣ ಮುಗಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಒಟ್ಟಾರೇ ಬರದ ನಾಡು ಚಿತ್ರದುರ್ಗ ಜಿಲ್ಲೆಯ ಅನ್ನದಾತರ ಪ್ರಾರ್ಥನೆ ಕೊನೆಗೂ ಫಲಿಸಿದ್ದು, ದಶಕಗಳ ಕನಸು ನನಸಾಗಿದೆ. ದುರ್ಗದತ್ತ ಭದ್ರೆ ಹರಿಯುತ್ತಿದ್ದು, ಬರದನಾಡು ಎಂಬ ಹಣೆ ಪಟ್ಟಿ ಕಳಚಿ ಬಿದ್ದು, ಪಾಪ ವಿಮೋಚನೆಯಾಗುವ ಕನಸು ಚಿಗುರೊಡೆದಿದೆ.

Edited By :
PublicNext

PublicNext

06/09/2026 09:31 pm

Cinque Terre

15.88 K

Cinque Terre

0

ಸಂಬಂಧಿತ ಸುದ್ದಿ