ಶಿವಮೊಗ್ಗ : 1995ರ ನಂತರ ಪ್ರಾರಂಭವಾದ ಅನುದಾನ ರಹಿತ ಕನ್ನಡ ಶಾಲೆಗಳನ್ನು ಕೂಡಲೇ ಸರ್ಕಾರದ ಅನುದಾನಕ್ಕೆ ಒಳಪಡಿಸುವಂತೆ ಆಗ್ರಹಿಸಿ ಶಿಕ್ಷಕರೊಬ್ಬರು ತಮ್ಮ ಸ್ವಂತ ರಕ್ತದಲ್ಲಿ ಪತ್ರ ಬರೆಯುವ ಮೂಲಕ ಅಪರೂಪದ ಹಾಗೂ ವಿಭಿನ್ನ ಪ್ರತಿಭಟನೆ ನಡೆಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಸಾಲೇಶ್ವರ ವಿದ್ಯಾ ಸಂಸ್ಥೆಯ ಶಿಕ್ಷಕ ಪ್ರಶಾಂತ್ ಎಂಬುವವರೇ ಈ ರೀತಿ ರಕ್ತದಲ್ಲಿ ಪತ್ರ ಬರೆದವರಾಗಿದ್ದಾರೆ. ಶಿಕಾರಿಪುರದಲ್ಲಿ ಇಂದು ನಡೆಯುತ್ತಿರುವ 'ಪ್ರಜಾಸೇವಾ ಆಂದೋಲನ' ಕಾರ್ಯಕ್ರಮದ ಹಿನ್ನೆಲೆಯಲ್ಲಿ, ಕಾರ್ಯಕ್ರಮಕ್ಕೆ ಆಗಮಿಸಲಿರುವ ರಾಜ್ಯ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಈ ರಕ್ತದ ಪತ್ರವನ್ನು ನೇರವಾಗಿ ಹಸ್ತಾಂತರಿಸಲು ಶಿಕ್ಷಕ ಪ್ರಶಾಂತ್ ನಿರ್ಧರಿಸಿದ್ದಾರೆ.
ಸಾಲೇಶ್ವರ ವಿದ್ಯಾ ಸಂಸ್ಥೆಯು ಕಳೆದ 31 ವರ್ಷಗಳಿಂದ ನಿರಂತರವಾಗಿ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸೇವೆ ಸಲ್ಲಿಸುತ್ತಾ ಬಂದಿದೆ. ಆದರೆ ಸರ್ಕಾರದಿಂದ ಸೂಕ್ತ ಅನುದಾನ ಸಿಗದೆ ಸಂಸ್ಥೆಯು ಇದೀಗ ಮುಚ್ಚುವ ಹಂತ ತಲುಪಿದೆ. ಕಳೆದ ಬಾರಿ ಸರ್ಕಾರದ ಅನುದಾನ ಹಂಚಿಕೆ ವೇಳೆಯಲ್ಲಿ ಕೇವಲ 'ಒಂದು ದಿನದ ಕೊರತೆ'ಯಿಂದಾಗಿ ಈ ಸಾಲೇಶ್ವರ ಶಿಕ್ಷಣ ಸಂಸ್ಥೆಯು ಅನುದಾನವನ್ನು ಕಳೆದುಕೊಂಡಿತ್ತು.
ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳು ಅನುದಾನವಿಲ್ಲದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದು, ಒಂದೊಂದಾಗಿ ಮುಚ್ಚುತ್ತಿವೆ. ಹೀಗಾಗಿ 1995ರ ನಂತರ ಆರಂಭಗೊಂಡ ಎಲ್ಲಾ ಕನ್ನಡ ಶಾಲೆಗಳಿಗೆ ಕೂಡಲೇ ಸರ್ಕಾರಿ ಅನುದಾನವನ್ನು ನೀಡಬೇಕು ಮತ್ತು ಕನ್ನಡ ಶಾಲೆಗಳನ್ನು ಹಾಗೂ ಶಿಕ್ಷಕರ ಬದುಕನ್ನು ಉಳಿಸಬೇಕು ಎಂದು ರಕ್ತದ ಪತ್ರದ ಮೂಲಕ ಶಿಕ್ಷಣ ಸಚಿವರಿಗೆ ಶಿಕಾರಿಪುರದ ಶಿಕ್ಷಕ ಪ್ರಶಾಂತ್ ಗಂಭೀರ ಮನವಿ ಮಾಡಿಕೊಂಡಿದ್ದಾರೆ.
PublicNext
08/09/2026 12:32 pm
LOADING...