ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಳಾರಿಯಲ್ಲಿ ಟ್ರಾನ್ಸ್‌ಫಾರ್ಮರ್ ಏರಿ ಆತಂಕ ಸೃಷ್ಟಿಸಿದ ವ್ಯಕ್ತಿ

ಬಳ್ಳಾರಿ : ಬಳ್ಳಾರಿಯ ಹಳೇ ತಾಲೂಕು ಕಚೇರಿ ಮುಂಭಾಗದ ಬ್ರೂಸ್‌ಪೇಟೆ ಪೊಲೀಸ್ ಠಾಣೆ ಬಳಿ ಶುಕ್ರವಾರ ಸಂಜೆ ಈ ಘಟನೆ ನಡೆದಿದೆ.

ಮುಂಡರಗಿ ಏರಿಯಾದ ನಿವಾಸಿ ಇಸ್ಮಾಯಿಲ್ ಎಂಬಾತ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯೊಂದಿಗೆ ಪೊಲೀಸ್ ಠಾಣೆಗೆ ಬಂದಿದ್ದ. ಠಾಣೆಯಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದ ವೇಳೆ ಏಕಾಏಕಿ ಅಲ್ಲಿಂದ ಓಡಿಹೋದ ಇಸ್ಮಾಯಿಲ್, ಸಮೀಪದಲ್ಲಿದ್ದ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಏರಿ ಕುಳಿತುಕೊಂಡಿದ್ದಾನೆ.

ಇಸ್ಮಾಯಿಲ್ ಟ್ರಾನ್ಸ್‌ಫಾರ್ಮರ್ ಏರುತ್ತಿದ್ದಂತೆ ಠಾಣೆ ಮುಂಭಾಗದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣ ಎಚ್ಚೆತ್ತ ಪೊಲೀಸರು ಜೆಸ್ಕಾಂ ಸಿಬ್ಬಂದಿಗೆ ಮಾಹಿತಿ ನೀಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ.

ಬಳಿಕ ಪೊಲೀಸರು ಹಾಗೂ ಜೆಸ್ಕಾಂ ಸಿಬ್ಬಂದಿ ಸತತವಾಗಿ ಮನವೊಲಿಸಿ ಇಸ್ಮಾಯಿಲ್‌ನನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾರೆ. ಅದೃಷ್ಟವಶಾತ್, ಆ ಸಂದರ್ಭದಲ್ಲಿ ಟ್ರಾನ್ಸ್‌ಫಾರ್ಮರ್‌ಗೆ ವಿದ್ಯುತ್ ಸಂಪರ್ಕ ಇರದಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.

ಇಬ್ಬರು ಪತ್ನಿಯರ ವಿಚಾರಕ್ಕೆ ಸಂಬಂಧಿಸಿದಂತೆ ಕೌಟುಂಬಿಕ ಕಲಹ ಉಂಟಾಗಿತ್ತು ಎನ್ನಲಾಗಿದ್ದು, ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಲು ಬಂದಿದ್ದಕ್ಕೆ ಇಸ್ಮಾಯಿಲ್ ಆಕ್ಷೇಪ ವ್ಯಕ್ತಪಡಿಸಿದ್ದ ಎನ್ನಲಾಗಿದೆ.

‘ಯಾರೂ ನನಗೆ ಬೇಡ’ ಎಂದು ಹೇಳಿ ಟ್ರಾನ್ಸ್‌ಫಾರ್ಮರ್ ಏರಿದ್ದಾನೆ ಎನ್ನಲಾಗಿದ್ದು, ಕೆಲಕಾಲ ಪೊಲೀಸರಿಗೂ ಈತನ ಹುಚ್ಚಾಟ ತಲೆನೋವಾಗಿ ಪರಿಣಮಿಸಿತ್ತು.

ಇಸ್ಮಾಯಿಲ್ ವಿರುದ್ಧ ಈ ಹಿಂದೆ ಹಲವು ಪ್ರಕರಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಕ್ಷಣಾರ್ಧದಲ್ಲಿ ನಡೆದ ಈ ಘಟನೆಯಿಂದ ಠಾಣೆ ಮುಂಭಾಗದಲ್ಲಿ ಜನಜಂಗುಳಿ ಸೇರಿದ್ದು, ಪೊಲೀಸರ ಸಮಯಪ್ರಜ್ಞೆಯಿಂದ ಸಂಭವಿಸಬಹುದಾದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

Edited By :
PublicNext

PublicNext

12/09/2026 02:32 pm

Cinque Terre

7.8 K

Cinque Terre

0

ಸಂಬಂಧಿತ ಸುದ್ದಿ