ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮರಕ್ಕೆ ಗುದ್ದಿ ಸರ್ವೀಸ್ ರಸ್ತೆಗೆ ಹಾರಿದ ಶಾಲಾ ವ್ಯಾನ್ : ಅದೃಷ್ಟವಶಾತ್ ಪಾರಾದ ಮಕ್ಕಳು

ಲಖನೌ : ವೇಗವಾಗಿ ಬಂದ ಶಾಲಾ ವ್ಯಾನ್‌ವೊಂದು ನಿಯಂತ್ರಣ ಕಳೆದುಕೊಂಡು ಮರಕ್ಕೆ ಅಪ್ಪಳಿಸಿ, ಸುಮಾರು ಐದು ಅಡಿ ಆಳದ ಸರ್ವೀಸ್ ರಸ್ತೆಗೆ ಹಾರಿ ಬಿದ್ದ ಭೀಕರ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ನಡೆದಿದೆ. ಸದ್ಯ ಈ ಮೈಜುಮ್ಮೆನಿಸುವ ಅಪಘಾತದ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ.

ಹೌದು ಗಾಜಿಯಾಬಾದ್‌ನ ವಿಜಯನಗರ ವ್ಯಾಪ್ತಿಯಲ್ಲಿ ಗುರುವಾರ ಬೆಳಿಗ್ಗೆ ಸುಮಾರು 7:30ಕ್ಕೆ ಈ ಅವಘಡ ಸಂಭವಿಸಿದೆ. ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವ್ಯಾನ್ ಅತಿಯಾದ ವೇಗದಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಮೊದಲು ರಸ್ತೆಬದಿಯ ಮರಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ವಾಹನವು ಪಕ್ಕದಲ್ಲೇ ಇದ್ದ ಐದು ಅಡಿ ಕೆಳಗಿನ ಸರ್ವೀಸ್ ರಸ್ತೆಗೆ ಬಿದ್ದಿದೆ. ಆದರೆ, ಇಷ್ಟೊಂದು ರಭಸವಾಗಿ ಬಿದ್ದರೂ ವಾಹನ ಪಲ್ಟಿಯಾಗದೇ ನೇರವಾಗಿ ನಿಂತಿದ್ದರಿಂದ ಭಾರಿ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ.

ಅಪಘಾತ ಸಂಭವಿಸಿದ ತಕ್ಷಣ, ಸಮೀಪದಲ್ಲೇ ನಡೆದು ಹೋಗುತ್ತಿದ್ದ ದಾರಿಹೋಕರೊಬ್ಬರು ಸಮಯಪ್ರಜ್ಞೆ ಮೆರೆದಿದ್ದಾರೆ. ತಕ್ಷಣವೇ ವ್ಯಾನ್ ಬಳಿ ಧಾವಿಸಿ, ವಾಹನದ ಗಾಜು ಒಡೆದು ಒಳಗಿದ್ದ ಮಕ್ಕಳನ್ನು ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ವ್ಯಾನ್‌ನಲ್ಲಿದ್ದ ಮಕ್ಕಳಿಗೆ ಹಾಗೂ ಚಾಲಕನಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ವಿಜಯನಗರ ಠಾಣೆಯ ಎಸ್‌ಎಚ್‌ಒ ಧರ್ಮಪಾಲ್ ಸಿಂಗ್ ಅವರು, ಅಪಘಾತಕ್ಕೆ ಚಾಲಕನ ಅಜಾಗರೂಕತೆಯೇ ಕಾರಣವೇ ಅಥವಾ ವಾಹನದಲ್ಲಿ ಯಾವುದಾದರೂ ತಾಂತ್ರಿಕ ದೋಷವಿತ್ತೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

Edited By : Nirmala Aralikatti
PublicNext

PublicNext

17/09/2026 04:47 pm

Cinque Terre

12.87 K

Cinque Terre

0

ಸಂಬಂಧಿತ ಸುದ್ದಿ