ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿರ್ಸಾ: 85ರ ಹರೆಯದಲ್ಲಿ ಎಂ.ಎ. ಪದವಿ; ಮೂರು ಯುದ್ಧಗಳ ಮಾಜಿ ಸೈನಿಕನ ಅಪೂರ್ವ ಸಾಧನೆ!

ಸಿರ್ಸಾ: ಸಾಧನೆಗೆ ವಯಸ್ಸು ಅಡ್ಡಿಯಲ್ಲ ಎಂಬುದಕ್ಕೆ ಹರಿಯಾಣದ ಸಿರ್ಸಾ ಜಿಲ್ಲೆಯ ಮಾಜಿ ಸೈನಿಕ ಲಾಲ್ ಚಂದ್ ಗೋದಾರ ಸಾಕ್ಷಿಯಾಗಿದ್ದಾರೆ. 85ನೇ ವಯಸ್ಸಿನಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಿಂದ ಎಂ. ಎ. ಪದವಿ ಪಡೆದಿರುವ ಇವರು, 1,200 ಅಂಕಗಳಿಗೆ 965 ಅಂಕ ಗಳಿಸಿದ್ದಾರೆ. ಇದೀಗ ಪಿಎಚ್‌ಡಿ ಅಥವಾ ಕಾನೂನು ಪದವಿ ಪಡೆಯುವ ಗುರಿ ಹೊಂದಿದ್ದಾರೆ.

ಚಿಕ್ಕಂದಿನಿಂದಲೂ ಉನ್ನತ ಶಿಕ್ಷಣ ಪಡೆಯಬೇಕೆಂಬ ಆಸೆ ಹೊಂದಿದ್ದ ಗೋದಾರ, ಸೇನಾ ಸೇವೆ ಹಾಗೂ ಕುಟುಂಬದ ಜವಾಬ್ದಾರಿಗಳಿಂದ ಓದನ್ನು ಮುಂದುವರಿಸಲು ಸಾಧ್ಯವಾಗಿರಲಿಲ್ಲ. 71ನೇ ವಯಸ್ಸಿನಲ್ಲಿ ಮತ್ತೆ ವಿದ್ಯಾಭ್ಯಾಸ ಆರಂಭಿಸಿದ ಅವರು, ಬಳಿಕ ಪದವಿ ಪೂರ್ಣಗೊಳಿಸಿ ಎಂ.ಎ. ವ್ಯಾಸಂಗಕ್ಕೆ ಮುಂದಾದರು.

ಶೈಕ್ಷಣಿಕ ಪಯಣದಲ್ಲಿ ಮೊಮ್ಮಕ್ಕಳು ಸಹ ಬೆಂಬಲ ನೀಡಿದ್ದರು. ಶಿಕ್ಷಣವು ಕೇವಲ ಪದವಿ ಪಡೆಯುವುದಕ್ಕಷ್ಟೇ ಸೀಮಿತವಲ್ಲ, ಅದು ಜ್ಞಾನ ಮತ್ತು ದೃಷ್ಟಿಕೋನವನ್ನು ವಿಸ್ತರಿಸುತ್ತದೆ ಎಂಬುದು ಅವರ ನಂಬಿಕೆ.

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಗೋದಾರ 1962ರ ಭಾರತ-ಚೀನಾ ಹಾಗೂ 1965 ಮತ್ತು 1971ರ ಭಾರತ-ಪಾಕಿಸ್ತಾನ ಯುದ್ಧಗಳಲ್ಲಿ ಭಾಗವಹಿಸಿದ್ದರು. ಸೇನೆಯಿಂದ ನಿವೃತ್ತರಾದ ಬಳಿಕ 1972ರಿಂದ 2002ರವರೆಗೆ ಹರಿಯಾಣ ಸಾರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದರು.

ನಿವೃತ್ತಿಯ ನಂತರ ಮಾಸ್ಟರ್ಸ್ ಅಥ್ಲೆಟಿಕ್ಸ್‌ನಲ್ಲೂ ಸಕ್ರಿಯರಾಗಿರುವ ಅವರು, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ 200ಕ್ಕೂ ಹೆಚ್ಚು ಪದಕಗಳನ್ನು ಗೆದ್ದಿದ್ದಾರೆ. ಇದರಲ್ಲಿ ಸುಮಾರು 150 ಚಿನ್ನ, 30 ಬೆಳ್ಳಿ ಹಾಗೂ 20 ಕಂಚಿನ ಪದಕಗಳಿವೆ.

Edited By :
PublicNext

PublicNext

20/09/2026 02:59 pm

Cinque Terre

5.66 K

Cinque Terre

0

ಸಂಬಂಧಿತ ಸುದ್ದಿ