ಮುಂಡರಗಿ : ರಕ್ತದಾನವು ಮನುಷ್ಯನ ದೇಹ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿ, ಹೃದಯಾಘಾತ ಹಾಗೂ ಕೊಲೆಸ್ಟ್ರಾಲ್ ಕಡಿಮೆಗೊಳಿಸಲು ಪ್ರಮುಖ ಆರೋಗ್ಯ ವಿಧಾನವಾಗಿದೆ. ಇಂತಹ ಮಹತ್ತರ ಕಾರ್ಯವನ್ನು ಗಣೇಶೋತ್ಸವದ ಅಂಗವಾಗಿ ಹಮ್ಮಿಕೊಂಡ ಮುಂಡರಗಿ ತಾಲೂಕು ಪಂಚಾಯಿತಿ ನಡೆ ಆದರಣೀಯ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ ಹೇಳಿದರು.
ಗಣೇಶೋತ್ಸವ 2026ರ ನಿಮಿತ್ತ ಮುಂಡರಗಿ ತಾಲೂಕು ಪಂಚಾಯಿತಿ ಆವರಣದಲ್ಲಿ ತಾಲೂಕು ಆಸ್ಪತ್ರೆ ಮುಂಡರಗಿ ಹಾಗೂ ಬಸವೇಶ್ವರ ರಕ್ತ ಕೇಂದ್ರ, ಗದಗ ಇವರ ಸಹಯೋಗದೊಂದಿಗೆ ಗುರುವಾರ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯವಂತ ಯುವಕರು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು. ಇದರಿಂದ ಆರೋಗ್ಯದ ಮೇಲೆ ಯಾವುದೇ ತೊಂದರೆ ಆಗುವುದಿಲ್ಲ. ಜೊತೆಗೆ ಹೊಸ ಚೈತನ್ಯ ಮೂಡುತ್ತದೆ. ಈ ಬಗ್ಗೆ ಪ್ರತಿಯೊಬ್ಬರೂ ಅರಿತುಕೊಂಡು ಸ್ವಯಂಪ್ರೇರಿತರಾಗಿ ರಕ್ತದಾನಕ್ಕೆ ಮುಂದಾಗಬೇಕು ಎಂದರು.
ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಡಿ.ಡಿ. ಮೋರನಾಳ ಮಾತನಾಡಿ, ರಕ್ತದಾನದಿಂದ ಸಂಕಷ್ಟದಲ್ಲಿರುವ ವ್ಯಕ್ತಿಗಳ ಜೀವ ಉಳಿಸಬಹುದಾಗಿದೆ. ಇದನ್ನರಿತು ಪ್ರತಿಯೊಬ್ಬರೂ ರಕ್ತದಾನ ಪ್ರಕ್ರಿಯೆಯಲ್ಲಿ ತೊಡಗಬೇಕು. ತುರ್ತು ಸಂದರ್ಭದಲ್ಲಿರುವ ವ್ಯಕ್ತಿಗಳಿಗೆ ರಕ್ತದಾನ ಮಾಡಿದರೆ ಒಂದು ಪ್ರಾಣ ಉಳಿಸಿದ ಪುಣ್ಯ ಲಭಿಸುತ್ತದೆ. ಹೀಗಾಗಿ ರಕ್ತದಾನ ಅತ್ಯಂತ ಶ್ರೇಷ್ಠವಾಗಿದೆ ಎಂದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ವಿಜಯಕುಮಾರ ಬೆಣ್ಣೆ ಮಾತನಾಡಿ, ತಾಲೂಕು ಪಂಚಾಯಿತಿ ಮುಂಡರಗಿ ವತಿಯಿಂದ ಪ್ರತಿವರ್ಷ ಗಣೇಶೋತ್ಸವದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ಆಯೋಜಿಸುವ ಮೂಲಕ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಪ್ರತಿವರ್ಷವೂ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲ ಅಪಘಾತ ಸಂದರ್ಭಗಳಲ್ಲಿ ರಕ್ತ ಸಿಗದೆ ಮೃತಪಟ್ಟಿರುವ ಉದಾಹರಣೆಗಳು ನಮ್ಮ ಕಣ್ಮುಂದೆ ಕಾಣಸಿಗುತ್ತಿದ್ದು, ಇದನ್ನರಿತು ಶಿಬಿರಗಳಲ್ಲಿ ಪಾಲ್ಗೊಂಡು ರಕ್ತದಾನ ಮಾಡುವ ಮೂಲಕ ಇತರರ ಜೀವ ಉಳಿಸಲು ನೆರವಾಗಬೇಕು ಎಂದು ಹೇಳಿದರು.
ಗ್ಯಾರಂಟಿ ಸಮಿತಿ ಸದಸ್ಯರಾದ ವಿಶ್ವನಾಥ ಪಾಟೀಲ, ಪುಲಕೇಶಿಗೌಡ ಪಾಟೀಲ, ರಾಜೇಸಾಬ ಬೆಟಗೇರಿ ಹಾಗೂ ಕೆಡಿಪಿ ಸಮಿತಿ ಸದಸ್ಯ ಎಂ.ಯು. ಮಕಾಂದಾರ ಮಾತನಾಡಿದರು.
ಆರೋಗ್ಯ ಶಿಬಿರದಲ್ಲಿ ನೇತ್ರ ತಪಾಸಣೆ, ಇಸಿಜಿ, ಎನ್‌ಸಿಡಿ ಪರೀಕ್ಷಾ ವಿಭಾಗ, ಕ್ಷಯರೋಗ ಪರೀಕ್ಷಾ ವಿಭಾಗ, ಮಧುಮೇಹ, ರಕ್ತದೊತ್ತಡ ಸೇರಿದಂತೆ ಇತರೆ ಆರೋಗ್ಯ ಪರೀಕ್ಷೆಗಳ ಮೂಲಕ ನೂರಾರು ಜನರು ಆರೋಗ್ಯ ತಪಾಸಣೆಗೆ ಒಳಗಾದರು.
ಸಹಾಯಕ ನಿರ್ದೇಶಕರಾದ ವಿಶ್ವನಾಥ ಹೊಸಮನಿ, ಪ್ರವೀಣ ಗೋಣೆಮ್ಮನವರ, ತಾಲೂಕು ವೈದ್ಯಾಧಿಕಾರಿ ಡಾ. ಕೀರ್ತಿಹಾಸ ಎಚ್.ಪಿ., ಫಿಜಿಶಿಯನ್ ಲಕ್ಷ್ಮಣ ಪೂಜಾರ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ನಾಗರಾಜ ಹಳ್ಳಿಕೇರಿ, ಜಿಲ್ಲಾ ಉಪಾಧ್ಯಕ್ಷ ಮಹೇಶ ಅಲ್ಲಿಪೂರ, ಪಿಡಿಒ ಸಂಘದ ಜಿಲ್ಲಾಧ್ಯಕ್ಷ ರಿಯಾಜ್ ಖತೀಬ, ಶಂಕರ ಸರವೆ, ವಸಂತ ಗೋಕಾಕ, ಮಹೇಶ ಕಳಸದ, ಮಂಜುಳಾ ಪಾಟೀಲ, ಫಕ್ರುದ್ಧಿನ ನದಾಫ, ಸಂತೋಷ ಮೇಟಿ, ವೀರೇಶ ಅವಾರಿ, ಮಹಾಂತೇಶ ತಳವಾರ, ಪ್ರೇಮಾ ಹಟ್ಟಿ, ಶಶಿಧರ ಹೊಂಬಳ, ಬಸವರಾಜ ಮೇವುಂಡಿ, ಜಗದೀಶ ಅರಣಿ, ತಾಲೂಕು ಪಂಚಾಯಿತಿ ಸಿಬ್ಬಂದಿ, ವಿಬಿಜಿ ರಾಮ್ ಜಿ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ವಿವಿಧ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.
ಶಾಬುದ್ಧಿನ ನದಾಫ ನಿರೂಪಿಸಿದರು. ಮಹೇಶ ಅಲ್ಲಿಪೂರ ವಂದಿಸಿದರು.
Kshetra Samachara
17/09/2026 06:23 pm