ಅಥಣಿ: ಒಂದೆಡೆ ಕಿತ್ತು ತಿನ್ನುವ ಬಡತನ, ಮತ್ತೊಂದು ಕಡೆಯಲ್ಲಿ ಬಿಟ್ಟರೂ, ಬಿಡುಗಡೆ ಕೊಡುವುದಿಲ್ಲ ಎಂಬುವಂತ ಮದ್ಯದ ವ್ಯಸನ. ಭೀಮಪ್ಪನ ಕುಟುಂಬದ ಮೇಲೆ ಕರಿ ನೆರಳು ಬೀಳುವಂತೆ ಮಾಡಿತ್ತು. ಊರಲ್ಲಿ ಹೊಲ,ಮನೆ ಕೆಲಸ ಮಾಡಿಕೊಂಡು ಬಿಡಿಗಾಸು ದುಡಿಯುತ್ತಿದ್ದರೂ, ದುಡಿದ ಹಣವೆಲ್ಲ ಮನೆಗೆ ಸೇರದೇ, ಸಾರಾಯಿ ಅಂಗಡಿಗೆ ಜಮೆಯಾಗುತ್ತಿತ್ತು. ವಿಮೆ ಮಾಡಿಸಲು ಹಿಂದೇಟು ಹಾಕುವಷ್ಟರ ಮಟ್ಟಿಗೆ ಕುಡಿಯುತ್ತಿದ್ದ ಭೀಮಪ್ಪ ಈಗ ಮಾದರಿ ವ್ಯಕ್ತಿಯಾಗಿದ್ದಾನೆ. ಭೀಮಪ್ಪನ ಪರಿವರ್ತನೆಯ ಇಂಟ್ರೆಸ್ಟಿಂಗ್ ಕಹಾನಿ ಇಲ್ಲಿದೆ ನೋಡಿ.
ಮನೆಯಲ್ಲಿ ಓದುವ ಮಕ್ಕಳು, ಬೇರೆಯವರ ಮನೆ ಕೆಲಸ ಮಾಡಿಕೊಂಡು ಕುಟುಂಬದ ಜವಾಬ್ದಾರಿ ಹೊತ್ತ ಮಡದಿ. ಇಷ್ಟೆಲ್ಲಾ ಕಷ್ಟಗಳು ಕಣ್ಣಮುಂದಿದ್ದರೂ, ಕುಡಿತದ ಚಟವನ್ನೇ ತನ್ನ ಹಠವನ್ನಾಗಿಸಿಕೊಂಡಿದ್ದ ಭೀಮಪ್ಪ ನಿಜಕ್ಕೂ ಮನೆಯಲ್ಲಿ ಹೆಸರಿಗಷ್ಟೇ ಮುಖ್ಯಸ್ಥನಾಗಿದ್ದ. ಕುಡಿತದ ಹವ್ಯಾಸ ಭೀಮಪ್ಪನ ಕುಟುಂಬವನ್ನೇ ಅಕ್ಷರಶಃ ಸಂಕಷ್ಟಕ್ಕೆ ದೂಡಿತ್ತು. ಹೌದು..ಅಥಣಿ ತಾಲೂಕಿನ ಸಣ್ಣ ಹಳ್ಳಿ ರೆಡ್ಡಿಯರಹಟ್ಟಿ, ಇಲ್ಲಿನ ಬಡ ಕುಟುಂಬ ಭೀಮಪ್ಪ ತಳವಾರ ಅವರ ಕುಟುಂಬ. ದುಡಿದೇ ತಿನ್ನಬೇಕಾದ ಅನಿವಾರ್ಯತೆ ಇದ್ದರೂ, ಸಾರಾಯಿ ವ್ಯಾಮೋಹ ಭೀಮಪ್ಪನನ್ನು ಮನೆಗೆ ಹೋಗಲು ಬಿಡುತ್ತಿರಲಿಲ್ಲ. ಇಂತಹ ಪರಿಸ್ಥಿತಿಯನ್ನು ಎದುರಿಸಿ ಮಾದರಿ ವ್ಯಕ್ತಿಯನ್ನಾಗಿ ಪರಿವರ್ತನೆ ಮಾಡಿದ್ದು, ಶ್ರೀಕ್ಷೇತ್ರ ಧರ್ಮಸ್ಥಳದ ಮದ್ಯವರ್ಜನ ಶಿಬಿರ. ಸಾರಾಯಿ ಕುಡಿಯುವುದು ಮೊದಲಿಗೆ ಹವ್ಯಾಸವಾಗಿದ್ದ ಭೀಮಪ್ಪನಿಗೆ ಚಟವಾಗಿ ಪರಿಣಮಿಸಿ, ಮನೆ, ಮಕ್ಕಳು ಎಲ್ಲರನ್ನೂ ಮರೆಯುವಂತೆ ಮಾಡಿತ್ತು. ಆಗ ಭೀಮಪ್ಪನಿಗೆ ಆತ್ಮಸ್ಥೈರ್ಯದ ಭೀಮ ಬಲ ತುಂಬಿದ ಮದ್ಯವರ್ಜನ ಶಿಬಿರ ಮನಃ ಪರಿವರ್ತನೆ ಮಾಡಿ ಭೀಮಪ್ಪನ ಬಾಳನ್ನು ಹಸನಾಗಿಸಿದೆ. ಮದ್ಯವರ್ಜನ ಶಿಬಿರದಲ್ಲಿ ಪರಿವರ್ತನೆಗೊಂಡ ಭೀಮಪ್ಪ ಈಗ ಎಲ್ಲರಿಗೂ ಮಾದರಿ ವ್ಯಕ್ತಿಯಾಗಿದ್ದಾನೆ.
ಇನ್ನೂ ಗಂಡನೇ ದೈವ ಎಂದುಕೊಂಡು ಕೈ ಹಿಡಿದು ಬಂದಿದ್ದ ಭೀಮಪ್ಪನ ಹೆಂಡತಿ ಸಂಗೀತಾಗೆ ಗಂಡನ ಕುಡಿತ ಸಾಕಷ್ಟು ತಲೆನೋವಾಗಿತ್ತು. ಯಾವಾಗ ಮನೆಗೆ ಬರುತ್ತಾನೋ..? ಕುಡಿದು ಎಲ್ಲಿ ಮಲಗಿದ್ದಾನೋ..? ಎಂದು ಪ್ರತಿ ಕ್ಷಣವೂ ಕನವರಿಸುತ್ತಿದ್ದ ಸಂಗೀತಾಳಿಗೆ ಈಗ ಗಂಡ ಕುಡಿತ ಬಿಟ್ಟಿದ್ದು, ಕಂಡ ಕನಸು ನನಸಾಗಿದ್ದು, ದೇವರೇ ಧರೆಗೆ ಇಳಿದು ಬಂದಂತಾಗಿದೆ. ದಿನವೂ ಬೇರೆಯವರ ಮನೆಯಲ್ಲಿ ಕಸ, ಮುಸುರೆ ಮಾಡಿ ಉಪವಾಸ ವನವಾಸ ಕಳೆದರೂ, ಚಿಂತೆಯಿಲ್ಲ. ಗಂಡ ಕುಡಿಯುವುದು ಬಿಟ್ಟರೇ ಸಾಕು ಎಂದುಕೊಂಡವಳಿಗೆ ವರವಾಗಿದ್ದೇ ಶ್ರೀಕ್ಷೇತ್ರ ಧರ್ಮಸ್ಥಳದ ಮದ್ಯವರ್ಜನ ಶಿಬಿರ.
ಒಟ್ಟಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಮದ್ಯವರ್ಜನ ಶಿಬಿರ ಬದುಕಿನ ಖುಷಿಯನ್ನು ಕಾಣದೇ ನೋವಲ್ಲಿ ದಿನ ಕಳೆದವರ ಬಾಳಿಗೆ ಹೊಸ ಅರ್ಥ ಕಲ್ಪಿಸಿದೆ. ಭೀಮಪ್ಪ ಹಾಗೂ ಸಂಗೀತಾರ ಕುಟುಂಬದಲ್ಲಿ ಸಂತೋಷ ನೆಲೆ ನಿಲ್ಲುವಂತೆ ಮಾಡಿರುವುದು ನಿಜಕ್ಕೂ ವಿಶೇಷವಾಗಿದೆ.
PublicNext
18/09/2026 10:48 am