ಗದಗ: ಗಜಾನನೋತ್ಸವ ಎಂದರೆ ಡಿಜೆ ಸದ್ದು, ಅದ್ಧೂರಿ ಮೆರವಣಿಗೆ ಎಂಬ ಅಬ್ಬರದ ನಡುವೆಯೇ ಲಕ್ಷ್ಮೇಶ್ವರ ಪಟ್ಟಣದ ವಿನಾಯಕ ನಗರ ಅಭಿವೃದ್ಧಿ ಸಮಿತಿ ವಿಭಿನ್ನವಾಗಿ ಗಣೇಶ ಹಬ್ಬ ಆಚರಿಸುವ ಮೂಲಕ ಗಮನ ಸೆಳೆಯಿತು.
ಗಣೇಶ ಹಬ್ಬದ ಪ್ರಯುಕ್ತ ದೇಶೀಯ ಕ್ರೀಡೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ವಿನಾಯಕ ನಗರದಲ್ಲಿ ಮಲ್ಲಕಂಬ ಕ್ರೀಡೆಯ ಪ್ರದರ್ಶನ ಆಯೋಜಿಸಲಾಗಿತ್ತು. ಕುಂದಗೋಳ ತಾಲೂಕಿನ ಹರ್ಲಾಪುರದ ಯುವಜನ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರದ ಜನಪದ ಹಾಗೂ ಕ್ರೀಡಾರಂಗ ಕುಟೀರದ ಮಕ್ಕಳಿಂದ ನಡೆದ ಮಲ್ಲಕಂಬ ಪ್ರದರ್ಶನ ನೆರೆದಿದ್ದವರ ಗಮನ ಸೆಳೆಯಿತು.
ಮಕ್ಕಳು ಮಲ್ಲಕಂಬದ ವಿವಿಧ ಕಸರತ್ತುಗಳನ್ನು ಪ್ರದರ್ಶಿಸುವ ಮೂಲಕ ದೇಶೀಯ ಕ್ರೀಡೆಯ ಮಹತ್ವವನ್ನು ಸಾರಿದರು. ಹಬ್ಬದ ಸಡಗರಕ್ಕೆ ಮೆರಗು ನೀಡಿದ ಈ ಪ್ರದರ್ಶನಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.
ಇದರ ಜೊತೆಗೆ ಧಾರ್ಮಿಕ ಕಾರ್ಯಕ್ರಮವಾಗಿ ಶನೇಶ್ವರ ಬಳಗದ ಮಹಿಳೆಯರಿಂದ ರುದ್ರಪಠಣ ನಡೆಯಿತು. ಧಾರ್ಮಿಕ ಆಚರಣೆ ಹಾಗೂ ದೇಶೀಯ ಕ್ರೀಡೆಗೆ ಸಮಾನ ಪ್ರಾಧಾನ್ಯತೆ ನೀಡುವ ಮೂಲಕ ವಿನಾಯಕ ನಗರ ಗಣೇಶ ಮಂಡಳಿ ಮಾದರಿಯಾಗಿದೆ ಎಂದು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು.
-ಸುರೇಶ ಎಸ್. ಲಮಾಣಿ, ಪಬ್ಲಿಕ್ ನೆಕ್ಸ್ಟ್, ಗದಗ
PublicNext
18/09/2026 01:21 pm
LOADING...