ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕರ್ತವ್ಯಲೋಪ ಆರೋಪ: ಬಾಗಲಕೋಟೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜಕುಮಾರ್ ಯರಗಲ್ ಅಮಾನತು

ಬಾಗಲಕೋಟೆ: ಕರ್ತವ್ಯಲೋಪ, ಸರ್ಕಾರಿ ನಿಯಮ ಉಲ್ಲಂಘನೆ ಹಾಗೂ ಅಧಿಕಾರ ದುರುಪಯೋಗದ ಆರೋಪದ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜಕುಮಾರ್ ಯರಗಲ್ ಅವರನ್ನು ಕರ್ನಾಟಕ ಸರ್ಕಾರ ಅಮಾನತುಗೊಳಿಸಿ ಆದೇಶ ಹೊರಡಿಸಿದೆ.

ಡಾ. ರಾಜಕುಮಾರ್ ಯರಗಲ್ ಅವರ ಪುತ್ರಿ ಡಾ. ಅಂಕಿತಾ ಯರಗಲ್ ಅವರು ಬಾಗಲಕೋಟೆಯ ಸರ್ಕಾರಿ ‘ನಮ್ಮ ಕ್ಲಿನಿಕ್‌’ನಲ್ಲಿ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ, ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ (MD) ಪದವಿ ವ್ಯಾಸಂಗ ಮಾಡುತ್ತಿದ್ದರು ಎಂಬ ಆರೋಪ ಕೇಳಿಬಂದಿತ್ತು. ಇದೇ ಅವಧಿಯಲ್ಲಿ ಅವರು ಕರ್ತವ್ಯಕ್ಕೆ ಗೈರಾಗಿದ್ದರೂ ಮಾಸಿಕ ₹70 ಸಾವಿರಕ್ಕೂ ಹೆಚ್ಚು ವೇತನ ಪಡೆಯುತ್ತಿದ್ದರು ಎಂಬ ಕುರಿತು ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದರು.

ಈ ವಿಚಾರ ಬೆಳಕಿಗೆ ಬಂದ ಬಳಿಕ ಡಾ. ಅಂಕಿತಾ ಅವರನ್ನು ‘ನಮ್ಮ ಕ್ಲಿನಿಕ್‌’ ವೈದ್ಯಾಧಿಕಾರಿ ಹುದ್ದೆಯಿಂದ ಬಿಡುಗಡೆ ಮಾಡಲಾಗಿತ್ತು. ಅನುಮತಿ ಇಲ್ಲದೆ ಏಕಕಾಲದಲ್ಲಿ ಸರ್ಕಾರಿ ಸೇವೆ ಹಾಗೂ ಪೂರ್ಣಾವಧಿ PG ವ್ಯಾಸಂಗ ನಡೆಸಿದ ಆರೋಪದ ಬಗ್ಗೆ ವಿಚಾರಣೆ ನಡೆಯುತ್ತಿದೆ. ನಿಯಮಬಾಹಿರವಾಗಿ ಪಾವತಿಯಾಗಿದ್ದ ವೇತನವನ್ನು ವಸೂಲಿ ಮಾಡುವ ಸಾಧ್ಯತೆಯನ್ನೂ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಡಾ. ರಾಜಕುಮಾರ್ ಯರಗಲ್ ವಿರುದ್ಧದ ಪ್ರಾಥಮಿಕ ತನಿಖೆಯಲ್ಲಿ ಕರ್ತವ್ಯಲೋಪ, ಸರ್ಕಾರಿ ನಿಯಮಗಳ ಉಲ್ಲಂಘನೆ ಹಾಗೂ ಅಧಿಕಾರ ದುರುಪಯೋಗದ ಆರೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ. ಪುತ್ರಿಯ ನೇಮಕಾತಿಯಲ್ಲಿ ತಮ್ಮ ಪಾತ್ರವಿಲ್ಲ ಎಂದು ಡಾ. ರಾಜಕುಮಾರ್ ಈ ಹಿಂದೆ ಹೇಳಿಕೊಂಡಿದ್ದರು ಎಂಬುದನ್ನೂ ವರದಿಗಳು ಉಲ್ಲೇಖಿಸಿವೆ.

Edited By :
Kshetra Samachara

Kshetra Samachara

18/09/2026 03:02 pm

Cinque Terre

1.06 K

Cinque Terre

0

ಸಂಬಂಧಿತ ಸುದ್ದಿ