ಮಂಗಳೂರು : ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ಕಳೆ ನೀಡುವ ನಿಟ್ಟಿನಲ್ಲಿ ಸುಮಾರು 200 ಮೀಟರ್ ಎತ್ತರದ ‘ಮಂಗಳೂರು ಐ’ (Mangaluru Eye) ವಾಣಿಜ್ಯ ಸಂಕೀರ್ಣ ನಿರ್ಮಾಣ ಸೇರಿದಂತೆ ಕರಾವಳಿ ಮತ್ತು ರಾಜ್ಯದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಒಟ್ಟು 61 ಪ್ರಮುಖ ವಿಷಯಗಳಿಗೆ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ನಗರದ ಪಡೀಲ್ ‘ಪ್ರಜಾಸೌಧ’ದಲ್ಲಿ ನಡೆದ ಐತಿಹಾಸಿಕ ರಾಜ್ಯ ಸಚಿವ ಸಂಪುಟ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದರು.
ಮಂಗಳೂರಿನಲ್ಲಿ ಪಿಪಿಪಿ ಮಾದರಿಯಲ್ಲಿ (ವಿಜಿಎಫ್ ಅನುದಾನದಡಿ) 200 ಮೀಟರ್ ಎತ್ತರದ ಗಗನಚುಂಬಿ ವಾಣಿಜ್ಯ ಗೋಪುರ ನಿರ್ಮಾಣವಾಗಲಿದೆ. ಇದರಲ್ಲಿ ಮೂರು ಸಮುದಾಯ ಭವನಗಳು, ಮೇಲ್ಭಾಗದಲ್ಲಿ ಸುತ್ತುವ ರೀವಲ್ವಿಂಗ್ ರೆಸ್ಟೋರೆಂಟ್ ಹಾಗೂ ನಗರವನ್ನು 360 ಡಿಗ್ರಿಯಲ್ಲಿ ವೀಕ್ಷಿಸಲು ಎರಡು ಅಂತಸ್ತುಗಳ ವೀಕ್ಷಣಾ ಗ್ಯಾಲರಿ ಇರಲಿದೆ.
ಕರಾವಳಿ-ಮಲೆನಾಡು ಪ್ರವಾಸೋದ್ಯಮ ನೀತಿ 2026:
ಈ ಭಾಗದ ಆರ್ಥಿಕತೆಗೆ ಉತ್ತೇಜನ ನೀಡಲು ಹೊಸ ನೀತಿಗೆ ಸಂಪುಟ ಅನುಮೋದನೆ ನೀಡಿದೆ. ಪ್ರಸ್ತುತ ರಾಜ್ಯಕ್ಕೆ ಬರುವ ಒಟ್ಟು ಪ್ರವಾಸಿಗರಲ್ಲಿ ಶೇ. 40-45ರಷ್ಟು ಮಂದಿ ಕರಾವಳಿಗೆ ಭೇಟಿ ನೀಡುತ್ತಿದ್ದು, ಅಂದಾಜು 300 ಮಿಲಿಯನ್ ಯುಎಸ್ ಡಾಲರ್ (ಸುಮಾರು 2,876.44 ಕೋಟಿ ರೂ.) ವಿದೇಶಿ ವಿನಿಮಯ ಆದಾಯ ತರುತ್ತಿದ್ದಾರೆ.
ಲೈಟ್‌ಹೌಸ್ ಪ್ರವಾಸೋದ್ಯಮ ಅಭಿವೃದ್ಧಿ:
ಮಂಗಳೂರಿನ ಲೈಟ್‌ಹೌಸ್ ಸುತ್ತಲಿನ 1.5 ಎಕರೆ ಪ್ರದೇಶದಲ್ಲಿ ಪಿಪಿಪಿ (DBFOT) ಮಾದರಿಯಲ್ಲಿ 60.34 ಕೋಟಿ ರೂ. ವೆಚ್ಚದಲ್ಲಿ 3-ಸ್ಟಾರ್ ಅಥವಾ ಮೇಲ್ದರ್ಜೆಯ 35 ಕೊಠಡಿಗಳ ಅತಿಥ್ಯ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗುವುದು. 30 ವರ್ಷಗಳ ಗುತ್ತಿಗೆ ಅವಧಿಯಲ್ಲಿ ಸರ್ಕಾರಕ್ಕೆ ಕನಿಷ್ಠ 34.21 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ ಎಂದರು.
ವೆನ್ಲಾಕ್ ಆಸ್ಪತ್ರೆ ಉನ್ನತೀಕರಣ:
ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯನ್ನು ರೀಜನಲ್ ಸೆಂಟರ್ ಆಗಿ ಪರಿವರ್ತಿಸಿ, ಹೆಚ್ಚುವರಿಯಾಗಿ 200 ಹಾಸಿಗೆಗಳು, ಐಸಿಯು ಮತ್ತು ನೂತನ ಉಪಕರಣಗಳನ್ನು ಒದಗಿಸಲು 425 ಕೋಟಿ ರೂ. ಮಂಜೂರು ಮಾಡಲಾಗಿದೆ.
ಕಿದ್ವಾಯಿ ಮತ್ತು ಜಯದೇವ ಶಾಖೆಗಳು:
ಮಂಗಳೂರಿನಲ್ಲಿ ಕಿದ್ವಾಯಿ ಮತ್ತು ಜಯದೇವ ಆಸ್ಪತ್ರೆಗಳ ನೂತನ ಶಾಖೆ ತೆರೆಯಲು ತಾತ್ವಿಕ ಒಪ್ಪಿಗೆ ನೀಡಲಾಗಿದೆ ಎಂದು ಡಾ. ಜಿ. ಪರಮೇಶ್ವರ್ ಹೇಳಿದರು.
PublicNext
18/09/2026 07:49 pm