ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು : ಮದುವೆಯಾಗಲು ಬರುತ್ತಿರುವುದಾಗಿ ಹೇಳಿ ಮಹಿಳೆಗೆ ₹1.91 ಲಕ್ಷ ವಂಚನೆ

ಮಂಗಳೂರು : ತಾನು ಲಂಡನ್‌ನಲ್ಲಿ ಮಕ್ಕಳ ವೈದ್ಯನಾಗಿದ್ದು, ಮದುವೆಯಾಗಲು ಭಾರತಕ್ಕೆ ಬರುತ್ತಿರುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ₹1.91 ಲಕ್ಷ ವಂಚಿಸಿದ ಬಗ್ಗೆ ಮಂಗಳೂರಿನ ಸೈಬರ್ ಎಕನಾಮಿಕ್ ಅಂಡ್ ನಾರ್ಕೋಟಿಕ್ಸ್ (ಸಿಇಎನ್) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

45 ವರ್ಷ ವಯಸ್ಸಿನ ಮಹಿಳೆ ಜೂನ್ ತಿಂಗಳಲ್ಲಿ ಮ್ಯಾಟ್ರಿಮೊನಿ ಆ್ಯಪ್ ಒಂದನ್ನು ತಮ್ಮ ಮೊಬೈಲ್‌ನಲ್ಲಿ ಡೌನ್‌ಲೋಡ್ ಮಾಡಿಕೊಂಡು, ತಮ್ಮ ವಿವರಗಳನ್ನು ನಮೂದಿಸಿ ನೋಂದಾಯಿಸಿಕೊಂಡಿದ್ದರು. ಸೆಪ್ಟೆಂಬರ್ 5ರಂದು ಅಪರಿಚಿತ ವ್ಯಕ್ತಿಯೊಬ್ಬರು ಮಹಿಳೆಗೆ ಕರೆ ಮಾಡಿ, ತಾನು ಡಾ. ಸುರೇಶ್ ಎಂದು ಪರಿಚಯಿಸಿಕೊಂಡು ಲಂಡನ್‌ನಲ್ಲಿ ಮಕ್ಕಳ ವೈದ್ಯನಾಗಿರುವುದಾಗಿ ತಿಳಿಸಿದ್ದಾನೆ. ಬಳಿಕ ಮಹಿಳೆಗೆ ವಾಟ್ಸಾಪ್ ಕರೆ ಮಾಡಿದ್ದಾನೆ. ಇದನ್ನು ನಂಬಿದ ಮಹಿಳೆ ಆತನೊಂದಿಗೆ ವಾಟ್ಸಾಪ್ ಕಾಲ್‌ನಲ್ಲಿ ಮಾತನಾಡುತ್ತಿದ್ದರು.

ಆತ ಲಂಡನ್‌ನಿಂದ ಬಂದು ಮದುವೆಯಾಗುವುದಾಗಿ ಮಹಿಳೆಯನ್ನು ನಂಬಿಸಿದ್ದಾನೆ. ಸೆಪ್ಟೆಂಬರ್ 14ರಂದು ಲಂಡನ್‌ನಿಂದ ಬರುತ್ತಿರುವುದಾಗಿ ತಿಳಿಸಿದ್ದು, ಸೆಪ್ಟೆಂಬರ್ 15ರಂದು ಮುಂಬೈ ಏರ್‌ಪೋರ್ಟ್‌ನಲ್ಲಿ ಹೆಲ್ತ್ ಚೆಕ್‌ಅಪ್ ಮಾಡಿಸಿಕೊಳ್ಳಬೇಕಿದೆ. ತನ್ನ ಬಳಿ ಭಾರತೀಯ ಕರೆನ್ಸಿ ಇಲ್ಲ ಎಂದು ತಿಳಿಸಿ, ಮೊದಲಿಗೆ ₹42,500 ಅನ್ನು ಗೂಗಲ್ ಪೇ ಮೂಲಕ ಕಳುಹಿಸುವಂತೆ ಸೂಚಿಸಿದ್ದಾನೆ. ಮಹಿಳೆ ಆತ ತಿಳಿಸಿದ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಿದ್ದರು.

ನಂತರ ಕಸ್ಟಮ್ಸ್ ಅಧಿಕಾರಿಗಳು ತನ್ನ ಲಗೇಜ್ ಹಾಗೂ ಫೋನ್‌ನ್ನು ವಶಪಡಿಸಿಕೊಂಡಿದ್ದು, ಅವುಗಳನ್ನು ಬಿಡಿಸಿಕೊಳ್ಳಲು ₹1,49,000 ನೀಡಬೇಕೆಂದು ತಿಳಿಸಿದ್ದಾನೆ. ಇದನ್ನು ನಂಬಿದ ಮಹಿಳೆ ಮತ್ತೆ ಹಣ ವರ್ಗಾವಣೆ ಮಾಡಿದ್ದಾರೆ. ಬಳಿಕ ಆತ ₹3 ಲಕ್ಷ ನೀಡುವಂತೆ ತಿಳಿಸಿದಾಗ ಮಹಿಳೆಗೆ ಅನುಮಾನ ಬಂದಿದೆ.

ಆರೋಪಿ ಹಂತ ಹಂತವಾಗಿ ಒಟ್ಟು ₹1,91,500 ಹಣವನ್ನು ಮೋಸದಿಂದ ವರ್ಗಾಯಿಸಿಕೊಂಡು ಆನ್‌ಲೈನ್ ವಂಚನೆ ಮಾಡಿರುವುದಾಗಿ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.

Edited By : PublicNext Desk
Kshetra Samachara

Kshetra Samachara

20/09/2026 05:36 am

Cinque Terre

2.16 K

Cinque Terre

0

ಸಂಬಂಧಿತ ಸುದ್ದಿ