ಮಂಗಳೂರು : ಕೌಟುಂಬಿಕ ಕಲಹದ ಬೆನ್ನಲ್ಲೇ ತಾಯಿ ತನ್ನ ಮಗು ಹಾಗೂ ಪತಿಯ ತಂಗಿಯ ಮಗುವನ್ನು ಬಾವಿಗೆಸೆದ ಪರಿಣಾಮ ಮೂರು ವರ್ಷದ ಮಗು ಮೃತಪಟ್ಟಿದ್ದು, ಮತ್ತೊಂದು ಮಗು ಗಂಭೀರವಾಗಿ ಅಸ್ವಸ್ಥಗೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪೆರ್ಣೆಯಲ್ಲಿ ಶನಿವಾರ ನಡೆದಿದೆ.
ಪೆರ್ಣೆ ನಿವಾಸಿಗಳಾದ ಸಿನಾನ್ (32) ಹಾಗೂ ನೂರುನ್ನಿಸಾ (28) ದಂಪತಿ ನಡುವೆ ಶನಿವಾರ ಮಧ್ಯಾಹ್ನ ದೂರವಾಣಿ ಕರೆಯಲ್ಲಿ ಜಗಳ ನಡೆದಿತ್ತು ಎನ್ನಲಾಗಿದೆ. ಈ ವೇಳೆ ಉಂಟಾದ ಕೌಟುಂಬಿಕ ಕಲಹದಿಂದ ಆಕ್ರೋಶಗೊಂಡ ನೂರುನ್ನಿಸಾ, ಮನೆಯಲ್ಲಿದ್ದ ತನ್ನ ಸುಮಾರು ಮೂರೂವರೆ ವರ್ಷದ ಮಗು ಹಾಗೂ ಪತಿಯ ಸಹೋದರಿಯ ಸುಮಾರು ಮೂರು ವರ್ಷದ ಮಗುವನ್ನು ಮನೆ ಸಮೀಪದಲ್ಲಿದ್ದ ಬಾವಿಗೆ ಎಸೆದಿದ್ದಾಳೆ ಎಂದು ಹೇಳಲಾಗಿದೆ.
ಈ ಘಟನೆ ಗಮನಕ್ಕೆ ಬರುತ್ತಿದ್ದಂತೆ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಬಾವಿಯಿಂದ ಮಕ್ಕಳನ್ನು ಮೇಲಕ್ಕೆತ್ತಿದ್ದಾರೆ. ಆದರೆ, ನೀರಿನಲ್ಲಿ ಮುಳುಗಿದ್ದ ಪತಿಯ ಸಹೋದರಿಯ ಮೂರು ವರ್ಷದ ಮಗು ಮೃತಪಟ್ಟಿದೆ. ನೂರುನ್ನಿಸಾಳ ಮಗುವನ್ನು ಗಂಭೀರ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮಗುವಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ. 121/2026ರಂತೆ ಪ್ರಕರಣ ದಾಖಲಾಗಿದೆ. ನೂರುನ್ನಿಸಾಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ಘಟನೆಗೆ ನಿಖರ ಕಾರಣ ಹಾಗೂ ಕೃತ್ಯದ ಹಿನ್ನೆಲೆ ಕುರಿತು ವಿಚಾರಣೆ ನಡೆಸುತ್ತಿದ್ದಾರೆ.
PublicNext
20/09/2026 10:38 am
LOADING...