ಉಡುಪಿ : ಅಗತ್ಯ ಮೂಲಸೌಕರ್ಯ, ವೈದ್ಯಕೀಯ ಉಪಕರಣಗಳು ಹಾಗೂ ವೈದ್ಯರು ಮತ್ತು ಸಿಬ್ಬಂದಿಯ ನೇಮಕಾತಿ ಇಲ್ಲದೆ ಅಜ್ಜರಕಾಡಿನ ನೂತನ ಜಿಲ್ಲಾಸ್ಪತ್ರೆ ಕಟ್ಟಡಕ್ಕೆ ತಾಲೂಕು ಆಸ್ಪತ್ರೆಯನ್ನು ಸ್ಥಳಾಂತರಿಸಲು ರಾಜ್ಯ ಸರ್ಕಾರ ಮುಂದಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ. 250 ಹಾಸಿಗೆಗಳ, ಆರು ಮಹಡಿಗಳ ನೂತನ ಜಿಲ್ಲಾಸ್ಪತ್ರೆ ಕಟ್ಟಡವನ್ನು ಮೂಲ ವಿಸ್ತೃತ ಯೋಜನಾ ವರದಿಯ ಪ್ರಕಾರ ಹಾಗೂ ರಾಜ್ಯದ ಇತರ ಜಿಲ್ಲಾ ಆಸ್ಪತ್ರೆಗಳಿಗೆ ಸಮಾನವಾಗಿ ಸಜ್ಜುಗೊಳಿಸದೆ, ತರಾತುರಿಯಲ್ಲಿ ಸ್ಥಳಾಂತರಕ್ಕೆ ಜಿಲ್ಲಾಡಳಿತ ಮುಂದಾಗಿದೆ.
ನೂತನ ಜಿಲ್ಲಾಸ್ಪತ್ರೆಗೆ ಅಗತ್ಯವಿರುವ ವೈದ್ಯರು, ಶುಶ್ರೂಷಕರು, ತಾಂತ್ರಿಕ ಸಿಬ್ಬಂದಿ ಹಾಗೂ ಇತರ ಸಿಬ್ಬಂದಿಯ ಹುದ್ದೆಗಳನ್ನು ಮಂಜೂರು ಮಾಡಿಲ್ಲ. ಸ್ಕ್ಯಾನಿಂಗ್, ಎಕ್ಸ್‌ರೇ ಸೇರಿದಂತೆ ಅಗತ್ಯ ವೈದ್ಯಕೀಯ ಯಂತ್ರೋಪಕರಣಗಳು, ಪೀಠೋಪಕರಣಗಳು, ಕಂಪ್ಯೂಟರ್‌ಗಳು ಮತ್ತು ಪ್ರಿಂಟರ್‌ಗಳನ್ನೂ ಒದಗಿಸಿಲ್ಲ. ಆರು ಮಹಡಿಗಳ ಕಟ್ಟಡವನ್ನು ಸ್ವಚ್ಛಗೊಳಿಸಲು ಅಗತ್ಯವಿರುವ ಸ್ವಚ್ಛತಾ ಸಿಬ್ಬಂದಿ ಹಾಗೂ ಪರಿಕರಗಳ ವ್ಯವಸ್ಥೆಯೂ ಆಗಿಲ್ಲ.
ಈ ಮಧ್ಯೆ, ಉಡುಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 120 ಹಾಸಿಗೆಗಳ ತಾಲೂಕು ಆಸ್ಪತ್ರೆಯನ್ನು ಯಾವುದೇ ಹೆಚ್ಚುವರಿ ಸೌಲಭ್ಯಗಳಿಲ್ಲದೆ ಅಜ್ಜರಕಾಡಿನ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲು ಸಿದ್ಧತೆ ನಡೆಸಲಾಗಿದೆ. ಪ್ರಸ್ತುತ ಆಸ್ಪತ್ರೆಯಲ್ಲಿರುವ ಸುಮಾರು 30 ವರ್ಷ ಹಳೆಯದಾದ, ತುಕ್ಕು ಹಿಡಿದ 120 ಹಾಸಿಗೆಗಳನ್ನೇ ಹೊಸ ಕಟ್ಟಡಕ್ಕೆ ಕೊಂಡೊಯ್ಯಲು ಮುಂದಾಗಿರುವುದಕ್ಕೆ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
17/10/2026 04:10 pm
LOADING...