ಕೊಪ್ಪಳ : ಜಿಲ್ಲೆಯಲ್ಲಿ ದಸರಾ ಹಬ್ಬದ ದಿನವೇ ಖಾಸಗಿ ಶಾಲೆಯ ಶಿಕ್ಷಕಿಯೊಬ್ಬರು ಮೃತಪಟ್ಟಿರುವ ಘಟನೆ ವರದಿಯಾಗಿದೆ. ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಶಿಕ್ಷಕಿಯ ಮೃತದೇಹ ಪತ್ತೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರೇಮ ವಿವಾದದ ಆರೋಪಗಳು ಕೇಳಿಬಂದಿವೆ.
ಮೃತ ಶಿಕ್ಷಕಿಯನ್ನು ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದ ಸಂಗೀತ ಮೇಟಿ ಎಂದು ಗುರುತಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಇವರು ಕೊಪ್ಪಳದ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದೆ. ನಿನ್ನೆ ಮುಂಜಾನೆ ಕೊಪ್ಪಳಕ್ಕೆ ಹೋಗಿ ಬರುವುದಾಗಿ ಮನೆಯಿಂದ ತೆರಳಿದ್ದ ಸಂಗೀತ ಅವರು ಮನೆಗೆ ಮರಳಿರಲಿಲ್ಲ. ಇಂದು ಬೆಳಗ್ಗೆ ವಿಜಯನಗರ ಜಿಲ್ಲೆಯ ಸಮೀಪದ ತುಂಗಭದ್ರಾ ಜಲಾಶಯದ ಹಿನ್ನೀರಿನಲ್ಲಿ ಅವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಈ ಪ್ರಕರಣದಲ್ಲಿ ಡೆತ್‌ನೋಟ್ ಪತ್ತೆಯಾಗಿದೆ ಎನ್ನಲಾಗಿದ್ದು, ಅದರಲ್ಲಿ ಪ್ರೇಮ ಸಂಬಂಧ ಹಾಗೂ ಮದುವೆ ವಿಚಾರವಾಗಿ ಉಂಟಾದ ಗೊಂದಲದ ಬಗ್ಗೆ ಉಲ್ಲೇಖವಿದೆ ಎಂಬ ಮಾಹಿತಿ ಹರಿದಾಡುತ್ತಿದೆ. ಸುಮಾರು 14 ವರ್ಷಗಳಿಂದ ವಿಕಾಸ್ ಕೊಪ್ಪದ ಎಂಬ ಯುವಕನೊಂದಿಗೆ ಸಂಗೀತ ಪ್ರೀತಿಯಲ್ಲಿದ್ದರು ಎನ್ನಲಾಗಿದೆ. ಈ ವಿಚಾರ ಎರಡೂ ಕುಟುಂಬಗಳಿಗೆ ತಿಳಿದಿತ್ತು ಎಂಬ ಮಾಹಿತಿಯೂ ಇದೆ. ಆದರೆ ಮದುವೆ ವಿಚಾರದಲ್ಲಿ ಗೊಂದಲ ಉಂಟಾಗಿತ್ತು ಎಂಬ ಆರೋಪ ಕೇಳಿಬಂದಿದೆ.
ವಿಕಾಸ್ ಅವರ ಅಣ್ಣ ವಸಂತ ಕೊಪ್ಪದ್ ಹಾಗೂ ಅವರ ಪತ್ನಿ ರೇಣುಕಾ ಮದುವೆಗೆ ಅಡ್ಡಿಪಡಿಸಿದ್ದರು ಎಂಬ ಆರೋಪವೂ ಕೇಳಿಬಂದಿದೆ. ಡೆತ್‌ನೋಟ್‌ನಲ್ಲಿ ವಿಕಾಸ್ ಕೊಪ್ಪದ್, ವಸಂತ ಕೊಪ್ಪದ್ ಹಾಗೂ ರೇಣುಕಾ ಅವರ ಹೆಸರುಗಳಿವೆ ಎನ್ನಲಾಗಿದ್ದು, ಈ ಮಾಹಿತಿಯನ್ನು ಪೊಲೀಸರು ಅಧಿಕೃತವಾಗಿ ದೃಢಪಡಿಸಬೇಕಿದೆ.
PublicNext
21/10/2026 08:59 am
LOADING...