ಶಿಗ್ಗಾವಿ : ಬಡ್ಡಿ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಯುವಕನನ್ನು ಅಪಹರಿಸಿ, ನಾಲ್ಕು ದಿನಗಳ ಕಾಲ ನಿರ್ಜನ ಪ್ರದೇಶದಲ್ಲಿ ಕೂಡಿ ಹಾಕಿ ಚಿತ್ರಹಿಂಸೆ ನೀಡಿರುವ ಘಟನೆ ಶಿಗ್ಗಾವಿ ತಾಲೂಕಿನ ಬಂಕಾಪುರ ಪಟ್ಟಣದಲ್ಲಿ ನಡೆದಿದೆ.
ಬಂಕಾಪುರ ಪಟ್ಟಣದ ಬೇಕರಿಯೊಂದರಲ್ಲಿ ಕೆಲಸ ಮಾಡುವ ಮಣಿಕಂಠ ಎಂಬ ಯುವಕ ಆರ್ಥಿಕ ತೊಂದರೆಯಿಂದಾಗಿ ಮೂರು ತಿಂಗಳ ಹಿಂದೆ ಮಂಜುನಾಥ ಕತ್ತಿ ಹಾಗೂ ನವೀನ ಹಾನಗಲ್ ಎಂಬುವವರಿಂದ ವಾರದ ಬಡ್ಡಿಗೆ ಸಾಲ ಪಡೆದಿದ್ದರು.
ಆದರೆ, ಕಳೆದ ಕೆಲ ದಿನಗಳಿಂದ ಬಡ್ಡಿ ನೀಡದ ಕಾರಣಕ್ಕೆ ಕೆಲಸ ಮುಗಿಸಿ ಮನೆಗೆ ಹೋಗುವಾಗ ಯುವಕನನ್ನು ಬೈಕ್‌ನಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಕೈ-ಕಾಲುಗಳನ್ನು ಕಟ್ಟಿಹಾಕಿ, ಬಾಯಿಗೆ ಬಟ್ಟೆ ತುರುಕಿದ್ದಾರೆ ಎನ್ನಲಾಗಿದೆ. ಬಳಿಕ ನಾಲ್ವರು ಸೇರಿ ಕಟ್ಟಿಗೆ ಹಾಗೂ ಪೈಪ್‌ನಿಂದ ಹಲ್ಲೆ ನಡೆಸಿ, ದೇಹದ ವಿವಿಧ ಭಾಗಗಳಿಗೆ ಸಿಗರೇಟ್‌ನಿಂದ ಸುಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಯುವಕನ ನರಳಾಟ ಗಮನಿಸಿದ ಸ್ಥಳೀಯರು ಆತನನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಸಂಬಂಧ ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ರಮೇಶ್ ಸೋಮಕ್ಕನವರ್, ಪಬ್ಲಿಕ್ ನೆಕ್ಸ್ಟ್
PublicNext
26/10/2026 12:45 pm
LOADING...