ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರಿನಲ್ಲಿ ಪ್ರತಿ ಮಂಗಳವಾರ ನಡೆಯುವ ವಾರದ ಸಂತೆ ಸಂಚಾರಕ್ಕೆ ತೊಂದರೆ ಉಂಟುಮಾಡುತ್ತಿದೆ. ನಾಲ್ಕು ಜಿಲ್ಲೆಗಳನ್ನು ಸಂಪರ್ಕಿಸುವ SH-2 ಹೆದ್ದಾರಿ ಬದಿಯಲ್ಲೇ ವ್ಯಾಪಾರ ನಡೆಯುವುದರಿಂದ ವಾಹನ ದಟ್ಟಣೆ ಹೆಚ್ಚಾಗಿ, ಅಪಘಾತದ ಭೀತಿ ಎದುರಾಗಿದೆ.
ತರಕಾರಿ, ಹಣ್ಣು, ಬಟ್ಟೆ ಸೇರಿದಂತೆ ವಿವಿಧ ಅಂಗಡಿಗಳು ಹೆದ್ದಾರಿ ಬದಿಯಲ್ಲಿ ತೆರೆಯುತ್ತವೆ. ಗ್ರಾಹಕರು ವಾಹನಗಳನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸುವುದರಿಂದ ಸಂಚಾರ ಮತ್ತಷ್ಟು ಅಸ್ತವ್ಯಸ್ತವಾಗುತ್ತದೆ. ಸಂತೆ ಸಮೀಪ ಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಿವೆ. ಮಂಗಳವಾರದಂದು ವಾಹನ ದಟ್ಟಣೆಯ ನಡುವೆ ವಿದ್ಯಾರ್ಥಿಗಳು ರಸ್ತೆ ದಾಟಬೇಕಾಗುತ್ತದೆ. ಇದರಿಂದ ಅಪಾಯ ಸಂಭವಿಸುವ ಸಾಧ್ಯತೆ ಇದೆ.
ಶಾಲಾ ಸಮಯದಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ, ವಿದ್ಯಾರ್ಥಿಗಳಿಗೆ ಸುರಕ್ಷಿತವಾಗಿ ರಸ್ತೆ ದಾಟಲು ವ್ಯವಸ್ಥೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಇನ್ನೂ ಸುತ್ತಮುತ್ತಲಿನ ಗ್ರಾಮಗಳಿಂದ ನೂರಾರು ಜನರು ಸಂತೆಗೆ ಬರುತ್ತಾರೆ. ಆದರೆ ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಪ್ರತ್ಯೇಕ ಸ್ಥಳ ಹಾಗೂ ಪಾರ್ಕಿಂಗ್ ವ್ಯವಸ್ಥೆ ಇಲ್ಲದ ಕಾರಣ ಹೆದ್ದಾರಿಯೇ ಮಾರುಕಟ್ಟೆ ಮತ್ತು ವಾಹನ ನಿಲುಗಡೆ ಪ್ರದೇಶವಾಗಿದೆ. ಹೆದ್ದಾರಿ ಬದಿಯಲ್ಲಿ ಸಂತೆ ನಡೆಸುವುದನ್ನು ತಪ್ಪಿಸಿ, ಪ್ರತ್ಯೇಕ ಮಾರುಕಟ್ಟೆ ಮತ್ತು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಬೇಕು. ಇದರಿಂದ ಸಂಚಾರ ದಟ್ಟಣೆ ಕಡಿಮೆಯಾಗುವುದರ ಜೊತೆಗೆ ವ್ಯಾಪಾರಕ್ಕೂ ಅನುಕೂಲವಾಗಲಿದೆ.
ಪ್ರತಿ ಮಂಗಳವಾರ ಸಮಸ್ಯೆ ಮುಂದುವರಿದರೂ ಶಾಶ್ವತ ಪರಿಹಾರ ಕೈಗೊಳ್ಳದಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗ್ರಾಮ ಪಂಚಾಯಿತಿ, ಪೊಲೀಸ್ ಇಲಾಖೆ ಮತ್ತು ತಾಲೂಕು ಆಡಳಿತ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ, ತಕ್ಷಣ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
ಅಪಘಾತದ ಬಳಿಕ ಕ್ರಮ ಕೈಗೊಳ್ಳುವುದಕ್ಕಿಂತ ಮುನ್ನೆಚ್ಚರಿಕೆ ಅಗತ್ಯ. ಅಕ್ಕಿಆಲೂರಿನ ವಾರದ ಸಂತೆಗೆ ವ್ಯವಸ್ಥಿತ ಸ್ಥಳ ಕಲ್ಪಿಸಿ, ಸಾರ್ವಜನಿಕರ ಸುರಕ್ಷತೆ ಖಚಿತಪಡಿಸಲು ಅಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ತಾರ ಎಂಬುದನ್ನು ಕಾದು ನೋಡಬೇಕಿದೆ..
ಲೋಕೇಶ್ ಸುಣಗಾರ್, ಪಬ್ಲಿಕ್ ನೆಕ್ಸ್ಟ್, ಹಾನಗಲ್
PublicNext
04/11/2026 01:26 pm