ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹಾವೇರಿ:ಸಕ್ಕರೆ ಸಚಿವರ ಮನೆ ಮುಂದೆ ಕಬ್ಬು ಬೆಳೆಗಾರರ ಧರಣಿ ತಾತ್ಕಾಲಿಕ ಅಂತ್ಯ.

ಹಾವೇರಿ: ಕಬ್ಬಿಗೆ ಸೂಕ್ತ ದರ ನಿಗದಿಪಡಿಸದೆ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಿರುವುದನ್ನು ವಿರೋಧಿಸಿ, ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಅವರ ಹಾವೇರಿ ನಗರದ ನೇತಾಜಿನಗರದಲ್ಲಿರುವ ನಿವಾಸದ ಮುಂದೆ ಕಬ್ಬು ಬೆಳೆಗಾರರು ನಡೆಸುತ್ತಿದ್ದ ಧರಣಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ಕಬ್ಬು ತುಂಬಿದ ಟ್ರ್ಯಾಕ್ಟರ್ ಗಳ ಸಮೇತ ನಿನ್ನೆಯಿಂದಲೇ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ನೂರಾರು ರೈತರು, ಕಬ್ಬಿಗೆ ದರ ನಿಗದಿಪಡಿಸುವವರೆಗೆ ಕಾರ್ಖಾನೆ ಆರಂಭಿಸಬಾರದು ಎಂದು ಪಟ್ಟು ಹಿಡಿದಿದ್ದರು. ಈ ಸಂದರ್ಭದಲ್ಲಿ ರೈತರು ವಿವಿಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ವಿಷಯ ತಿಳಿದು ಸ್ಥಳಕ್ಕೆ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಭೇಟಿ ನೀಡಿ ರೈತರೊಂದಿಗೆ ಮಾತುಕತೆ ನಡೆಸಿದರು. ಕಾರ್ಖಾನೆ ಮಾಲೀಕರೊಂದಿಗೆ ನಾಳೆ ಸಂಜೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುವುದು. ರೈತ ಮುಖಂಡರು ಹಾಗೂ ಕಾರ್ಖಾನೆ ಮಾಲೀಕರು ಸಭೆಯಲ್ಲಿ ಭಾಗವಹಿಸಿ ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳೋಣ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ಅಧಿಕಾರಿಗಳ ಮನವಿಗೆ ಸ್ಪಂದಿಸಿದ ರೈತ ಮುಖಂಡರು, ನಾಳೆ ನಡೆಯಲಿರುವ ಸಭೆಯಲ್ಲಿ ದರ ನಿಗದಿ ಕುರಿತು ಚರ್ಚಿಸಲು ಒಪ್ಪಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಹಾಗೂ ಎಸ್ಪಿ ನಡೆಸಿದ ಸಂಧಾನ ಸಫಲವಾಗಿದ್ದು, ಮಾತುಕತೆಗೆ ಸಮಯ ನಿಗದಿಯಾದ ಹಿನ್ನೆಲೆಯಲ್ಲಿ ರೈತರು ಧರಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಆದರೆ, ಕಬ್ಬಿಗೆ ಸೂಕ್ತ ದರ ನಿಗದಿಯಾಗುವವರೆಗೆ ತಮ್ಮ ಹೋರಾಟದ ನಿಲುವಿನಲ್ಲಿ ಬದಲಾವಣೆ ಇಲ್ಲ ಎಂಬ ಸಂದೇಶವನ್ನು ರೈತರು ನೀಡಿದ್ದಾರೆ.

Edited By : Somashekar
PublicNext

PublicNext

01/11/2026 10:36 pm

Cinque Terre

8.11 K

Cinque Terre

0

ಸಂಬಂಧಿತ ಸುದ್ದಿ