ಹಾವೇರಿ : ಕಬ್ಬಿನ ದರ ನಿಗದಿ ವಿಚಾರವಾಗಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ರೈತರು ಹಾಗೂ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳ ಸಭೆ ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳದೆ ಮುಕ್ತಾಯಗೊಂಡಿದೆ. ಹಾವೇರಿ ಜಿಲ್ಲಾ ಭವನದಲ್ಲಿ ನಡೆದ ಸಭೆಯಲ್ಲಿ ಕಾರ್ಖಾನೆ ಮಾಲೀಕರು ಖುದ್ದಾಗಿ ಪಾಲ್ಗೊಳ್ಳದೆ ತಮ್ಮ ಸಿಬ್ಬಂದಿಯನ್ನು ಕಳುಹಿಸಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.
ಸಭೆಯ ಬಳಿಕ ಮಾತನಾಡಿದ ಹಾವೇರಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಭುವನೇಶ್ವರ್ ಶಿಡ್ಲಾಪುರ, ರೈತರ ಸಮಸ್ಯೆಗಳಿಗೆ ಕಾರ್ಖಾನೆ ಮಾಲೀಕರು ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಬ್ಬಿಗೆ ಪ್ರತಿ ಟನ್ಗೆ ಆರಂಭದಲ್ಲಿ ₹4,500 ನೀಡುವಂತೆ ರೈತರು ಬೇಡಿಕೆ ಇಟ್ಟಿದ್ದರು. ಬಳಿಕ ಕನಿಷ್ಠ ₹3,500 ನೀಡಿದರೂ ಕಾರ್ಖಾನೆ ಆರಂಭಕ್ಕೆ ಅವಕಾಶ ನೀಡುವ ಬಗ್ಗೆ ರೈತರು ಸಮ್ಮತಿ ಸೂಚಿಸಿದ್ದರು ಎಂದು ತಿಳಿಸಿದರು.
ಆದರೆ, ಕಾರ್ಖಾನೆಗಳ ಕಡೆಯಿಂದ ಪ್ರತಿ ಟನ್ ಕಬ್ಬಿಗೆ ಕೇವಲ ₹2,900 ನೀಡುವ ಪ್ರಸ್ತಾಪ ಮುಂದಿಟ್ಟಿರುವುದು ರೈತರ ಅಸಮಾಧಾನಕ್ಕೆ ಮತ್ತಷ್ಟು ತುಪ್ಪ ಸುರಿದಿದೆ. ರೈತರ ಬೇಡಿಕೆ ಮತ್ತು ಕಾರ್ಖಾನೆಗಳ ಪ್ರಸ್ತಾಪದ ನಡುವೆ ಭಾರಿ ವ್ಯತ್ಯಾಸವಿರುವುದರಿಂದ ಸಭೆಯಲ್ಲಿ ಒಮ್ಮತ ಮೂಡಲಿಲ್ಲ. ಜಿಲ್ಲಾಧಿಕಾರಿಗಳು ಸಂಧಾನಕ್ಕೆ ಪ್ರಯತ್ನಿಸಿದರೂ ಕಾರ್ಖಾನೆ ಮಾಲೀಕರ ಅನುಪಸ್ಥಿತಿಯಿಂದ ಮಾತುಕತೆ ಫಲಪ್ರದವಾಗಲಿಲ್ಲ.
ಕನಿಷ್ಠ ₹3,500 ಪ್ರತಿ ಟನ್ಗೆ ನೀಡುವ ಕುರಿತು ಕಾರ್ಖಾನೆ ಮಾಲೀಕರು ಸ್ಪಷ್ಟ ನಿರ್ಧಾರ ಪ್ರಕಟಿಸಬೇಕು. ಇಲ್ಲದಿದ್ದರೆ ಜಿಲ್ಲೆಯ ಯಾವುದೇ ಸಕ್ಕರೆ ಕಾರ್ಖಾನೆಗಳ ಕಾರ್ಯಾರಂಭಕ್ಕೆ ಅವಕಾಶ ನೀಡುವುದಿಲ್ಲ ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ ಕಬ್ಬಿನ ದರದ ವಿವಾದ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಎದುರಾಗಿದ್ದು, ಮುಂದಿನ ದಿನಗಳಲ್ಲಿ ರೈತರು ಯಾವ ರೀತಿಯ ಹೋರಾಟದ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬ ಕುತೂಹಲ ಮೂಡಿದೆ.
PublicNext
04/11/2026 07:53 am
LOADING...