ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ : ವಿಧಾನಪರಿಷತ್‌ ಚುನಾವಣೆ ಫಲಿತಾಂಶ 2028ರ ವಿಧಾನಸಭಾ ಚುನಾವಣೆಗೆ ದಿಕ್ಸೂಚಿ – ಶ್ರೀರಾಮುಲು

ದಾವಣಗೆರೆ: "ಇತ್ತೀಚೆಗೆ ನಡೆದ ವಿಧಾನಪರಿಷತ್‌ನ 4 ಕ್ಷೇತ್ರಗಳ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ಸಾಧಿಸಿರುವ ಜಯಭೇರಿಯು 2028ರ ರಾಜ್ಯ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ" ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. ಶಿಕ್ಷಕರು ಮತ್ತು ಪದವೀಧರ ಮತದಾರರು ರಾಜ್ಯ ಸರ್ಕಾರದ ಆಡಳಿತ ವೈಫಲ್ಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಉತ್ತರ ನೀಡಿದ್ದಾರೆ ಎಂದರು.

ಖಜಾನೆಯಲ್ಲಿ ಹಣವಿಲ್ಲ ಎಂದು ಖುದ್ದು ಸಿಎಂ ಅವರೇ ಹೇಳುತ್ತಿದ್ದಾರೆ. ಒಂದೆಡೆ ಕಬ್ಬು ಬೆಳೆಗಾರರು, ರೈತರು ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ಸಂಕಷ್ಟದಲ್ಲಿದ್ದು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ರಾಜ್ಯದ ಕಾಂಗ್ರೆಸ್ ಸರ್ಕಾರ ಜನರಿಗೆ ಯಾವುದೇ ಸೌಲಭ್ಯ ನೀಡಲಾಗದ ‘ಬರಿಗೈ, ಒಂಟಿ ಕೈ ಹಾಗೂ ದೋಚುವ ಕೈ’ ಆಗಿದೆ" ಎಂದು ಲೇವಡಿ ಮಾಡಿದರು.

"ಕಾಂಗ್ರೆಸ್‌ನವರು ಈ ಹಿಂದೆ ಇವಿಎಂ (EVM) ಮೇಲೆ ಅಪನಂಬಿಕೆ ವ್ಯಕ್ತಪಡಿಸಿ ಬೊಬ್ಬೆ ಹೊಡೆಯುತ್ತಿದ್ದರು. ಈಗ ಬ್ಯಾಲೆಟ್ ಪೇಪರ್ ಚುನಾವಣೆಯಲ್ಲೂ ಸೋತಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ಕಾಂಟ್ರಾಕ್ಟ್ ಆಧಾರದ ಮೇಲೆ ಅಧಿಕಾರ ಕೊಡಿ ಎಂದು ಕೇಳುತ್ತಾರೇನೋ" ಎಂದು ಚಾಟಿ ಬೀಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಜೂಜಾಟ, ಓಸಿ ಮಟ್ಕಾ ಮತ್ತು ಡ್ರಗ್ಸ್ ದಂಧೆ ಮಿತಿಮೀರಿದೆ. ವಿಧಾನಸೌಧದ ಪ್ರತಿಯೊಂದು ಕಲ್ಲೂ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದೆ. ಕರ್ನಾಟಕವು ಕಾಂಗ್ರೆಸ್ ಹೈಕಮಾಂಡ್‌ಗೆ ಎಟಿಎಂ (ATM) ಆಗಿ ಬದಲಾಗಿದೆ" ಎಂದು ಆರೋಪಿಸಿದರು.

ಡಿ.ಕೆ. ಶಿವಕುಮಾರ್ ಅವರಿಗೆ ಸಚಿವರು ಹಾಗೂ ಶಾಸಕರ ಬೆಂಬಲವಿಲ್ಲ ಎಂದು ಹೇಳಿದ ಶ್ರೀರಾಮುಲು, ಸರ್ಕಾರದ ಬೇಜವಾಬ್ದಾರಿಯಿಂದಾಗಿ ಎಸ್‌ಸಿ/ಎಸ್‌ಟಿ (SC/ST) ಮೀಸಲಾತಿಯಲ್ಲಿ ಅನ್ಯಾಯವಾಗಿದೆ ಎಂದರು. ಅಲ್ಲದೇ, ಸಿದ್ದರಾಮಯ್ಯ ಅವರ ರಾಜಕೀಯ ಜೀವನಕ್ಕೆ ಕಳಂಕ ಬಂದಾಗ ಸೂಕ್ತ ತನಿಖೆಯಾಗಬೇಕಿತ್ತು ಎಂದು ಅಭಿಪ್ರಾಯಪಟ್ಟರು.

ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ್ ಖರ್ಗೆ ಅವರ ಹೇಳಿಕೆಗಳನ್ನು ವಿರೋಧಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕಾಗಿ ದೇಶದ ಜನತೆಯಲ್ಲಿ ಖರ್ಗೆಯವರು ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು. ಮುಂಬರುವ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸೇರಿದಂತೆ ಎಲ್ಲಾ ಚುನಾವಣೆಗಳನ್ನು ಎದುರಿಸಲು ಬಿಜೆಪಿ-ಜೆಡಿಎಸ್ ಮೈತ್ರಿಕೂಟ ಸಂಪೂರ್ಣ ಸಿದ್ಧವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

Edited By :
Kshetra Samachara

Kshetra Samachara

28/10/2026 08:31 pm

Cinque Terre

1.5 K

Cinque Terre

0

ಸಂಬಂಧಿತ ಸುದ್ದಿ