ದಾವಣಗೆರೆ: ರಾಜ್ಯದಲ್ಲಿ ಹಾಲಿನ ದರ ಏರಿಕೆ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ರೈತರ ಹಿತದೃಷ್ಟಿಯಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ದಾವಣಗೆರೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, "ರಾಜ್ಯದಲ್ಲಿ ಪ್ರತಿಯೊಂದರ ಬೆಲೆಯೂ ಹೆಚ್ಚಾಗುತ್ತಿದ್ದು, ಹಾಲಿನ ದರ ಪರಿಷ್ಕರಣೆ ಮಾಡುವಂತೆ ಸಾಕಷ್ಟು ಸಂಖ್ಯೆಯಲ್ಲಿ ರೈತರು ಮನವಿ ಸಲ್ಲಿಸಿದ್ದರು. ಸದ್ಯ ಮೇವಿನ ದರ, ಸಾರಿಗೆ ವೆಚ್ಚ ಹಾಗೂ ಡೀಸೆಲ್ ದರಗಳು ಗಮನಾರ್ಹವಾಗಿ ಏರಿಕೆಯಾಗಿವೆ. ನೆರೆ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿಯೂ ಹಾಲಿನ ದರ ಹೆಚ್ಚಾಗಿದ್ದು, ಎಲ್ಲವನ್ನೂ ಕೂಲಂಕಷವಾಗಿ ಪರಿಶೀಲಿಸಿಯೇ ಹಾಲಿನ ದರ ಹೆಚ್ಚಿಸುವ ನಿರ್ಧಾರ ಮಾಡಲಾಗಿದೆ" ಎಂದರು.
ಪ್ರತಿಪಕ್ಷಗಳ ಟೀಕೆಗೆ ತಿರುಗೇಟು ನೀಡಿದ ಅವರು, "ವಿರೋಧ ಪಕ್ಷದ ಕೆಲಸವೇ ಟೀಕೆ ಮಾಡುವುದು. ಆದರೆ ಸರ್ಕಾರ ರೈತರ ಹಿತಾಸಕ್ತಿಯನ್ನು ಕಾಯಬೇಕಿದೆ" ಎಂದು ಹೇಳಿದರು.
ಇದೇ ವೇಳೆ ಅಪ್ಪರ್ ಭದ್ರಾ ಯೋಜನೆಯಿಂದ ಒಂದು ಟಿಎಂಸಿ ನೀರು ಬಿಡುಗಡೆ ಮಾಡುವ ಆದೇಶಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು, "ಈ ಕುರಿತು ನೀರಾವರಿ ಸಚಿವರ ಜೊತೆ ಮಾತನಾಡಿದ್ದೇನೆ. ನೀರು ಬಿಡುಗಡೆ ಮಾಡುವ ಮುನ್ನ ಜನಪ್ರತಿನಿಧಿಗಳು ಹಾಗೂ ಶಾಸಕರ ಸಭೆ ಕರೆಯುವಂತೆ ಕೋರಲಾಗಿದೆ. ಸಭೆ ನಡೆಸಿ ಚರ್ಚಿಸುವವರೆಗೂ ನೀರು ಬಿಡುಗಡೆ ನಿರ್ಧಾರ ಕೈಗೊಳ್ಳದಂತೆ ಮನವಿ ಮಾಡಿದ್ದು, ಸಭೆಯ ನಂತರವೇ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು" ಎಂದು ಮಾಹಿತಿ ನೀಡಿದರು.
PublicNext
01/11/2026 07:33 pm
LOADING...