ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ : ಮೀಸಲಾತಿ ಶೇ. 56ಕ್ಕೇರಿಸಿದ್ದ ಕಾಯ್ದೆ ರದ್ದು, ಕಾಂಗ್ರೆಸ್‌ ವಿರುದ್ಧ ಬಿ.ವೈ. ವಿಜಯೇಂದ್ರ ತೀವ್ರ ವಾಗ್ದಾಳಿ

ದಾವಣಗೆರೆ: ಒಟ್ಟಾರೆ ಮೀಸಲಾತಿಯನ್ನು ಶೇ. 56ಕ್ಕೆ ಹೆಚ್ಚಿಸಿದ್ದ ರಾಜ್ಯ ಸರ್ಕಾರದ ಕಾಯ್ದೆಯನ್ನು ಹೈಕೋರ್ಟ್ ರದ್ದುಪಡಿಸಿರುವುದಕ್ಕೆ ಸಂಬಂಧಿಸಿದಂತೆ, ಇದರ ಹಿಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಂಡದ ಕೈವಾಡವಿದೆ ಎಂದಿದ್ದ ಕಾಂಗ್ರೆಸ್ ಮುಖಂಡ ವಿ.ಎಸ್. ಉಗ್ರಪ್ಪ ಅವರ ಹೇಳಿಕೆಗೆ ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ, "ಯಾವನೋ ಹೇಳಿದ" ಎಂದು ಏಕವಚನದಲ್ಲೇ ತಿರುಗೇಟು ನೀಡಿದ್ದು, ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದಾರೆ.

"ಈ ನನ್ಮಕ್ಕಳಿಗೆ ಮಾನ-ಮರ್ಯಾದೆ ಇದೆಯಾ? ಸುಪ್ರೀಂ ಕೋರ್ಟ್‌ ಆದೇಶವನ್ನು ಸದ್ಬಳಕೆ ಮಾಡಿಕೊಳ್ಳದೇ, ನ್ಯಾಯಾಲಯದಲ್ಲಿ ಸೂಕ್ತ ವಾದ ಮಂಡನೆ ಮಾಡಲು ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಪಟ ನಾಟಕವಾಡಿ ಗೊಂದಲ ಸೃಷ್ಟಿಸಿದ ಕಾಂಗ್ರೆಸ್ ನಾಯಕರು, ಈಗ ತಮ್ಮ ತಪ್ಪು ಮುಚ್ಚಿಕೊಳ್ಳಲು ಪ್ರಧಾನಿ ಮೋದಿ ಅವರ ಮೇಲೆ ಗೂಬೆ ಕೂರಿಸಲು ಹೊರಟಿದ್ದಾರೆ" ಎಂದು ಆರೋಪಿಸಿದರು.

ಕಬ್ಬಿನ ವಿಚಾರ ಬಂದಾಗ ವಿಶೇಷ ವಿಮಾನದಲ್ಲಿ ಬೆಳಗಾವಿಗೆ ಹಾರಿ ಹೋದವರು ಕಬ್ಬು ಬೆಳೆಗಾರರ ಸಮಸ್ಯೆಯನ್ನು ಗಂಭೀರವಾಗಿ ಪರಿಹರಿಸಲಿಲ್ಲ. ರಾಜ್ಯದ ಸಕ್ಕರೆ ಕಾರ್ಖಾನೆಗಳಿಂದ ಪ್ರತಿ ವರ್ಷ ಸರ್ಕಾರಕ್ಕೆ ಸುಮಾರು ₹15,000 ಕೋಟಿ ಆದಾಯ ಬರುತ್ತದೆ. ಆದರೂ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಇದಕ್ಕಾಗಿ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸುತ್ತಿದೆ" ಎಂದರು.

ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಗತಿ ಕುರಿತು ತಕ್ಷಣವೇ ಶ್ವೇತಪತ್ರ ಬಿಡುಗಡೆ ಮಾಡಬೇಕೆಂದು ವಿಜಯೇಂದ್ರ ಆಗ್ರಹಿಸಿದರು. "ಸ್ವತಃ ಮುಖ್ಯಮಂತ್ರಿಗಳೇ 'ಜೇಬು ಖಾಲಿ ಇದೆ' ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ರಾಜ್ಯದ ಖಜಾನೆ ಸಂಪೂರ್ಣವಾಗಿ ಖಾಲಿಯಾಗಿದೆ ಎಂಬುದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಬೇಕೇ?" ಎಂದು ಪ್ರಶ್ನಿಸಿದರು.

Edited By :
PublicNext

PublicNext

31/10/2026 09:15 pm

Cinque Terre

13.44 K

Cinque Terre

0

ಸಂಬಂಧಿತ ಸುದ್ದಿ