ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಳಗಾವಿ: ಅದ್ಧೂರಿ ಕರ್ನಾಟಕ ರಾಜ್ಯೋತ್ಸವಕ್ಕೆ ಬೆಳಗಾವಿ ಸಜ್ಜು : ಆಕರ್ಷಕ ರೂಪಕಗಳಿಗೆ ಅಂತಿಮ ಸ್ಪರ್ಶ

ಬೆಳಗಾವಿ: ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಬಿಂಬಿಸುವ ಅದ್ಧೂರಿ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಗಡಿನಾಡು, ಕುಂದಾನಗರಿ ಬೆಳಗಾವಿ ಸಕಲ ರೀತಿಯಲ್ಲಿ ಸಜ್ಜಾಗುತ್ತಿದೆ. ನಗರದ ಪ್ರಮುಖ ವೃತ್ತಗಳು, ರಸ್ತೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ರಾಜ್ಯೋತ್ಸವ ಮೆರವಣಿಗೆಯಲ್ಲಿ ಗಮನ ಸೆಳೆಯಲಿರುವ ವಿವಿಧ ಆಕರ್ಷಕ ರೂಪಕಗಳಿಗೆ ಕಲಾವಿದ ಆಕಾಶ ಹಲಗೇಕರ್ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ.

ನಗರದ ರಾಣಿ ಚನ್ನಮ್ಮ ವೃತ್ತದ ನಾಲ್ಕೂ ದಿಕ್ಕುಗಳಲ್ಲಿ ಹಳದಿ-ಕೆಂಪು ಬಣ್ಣದ ಬೃಹತ್ ಮಹಾದ್ವಾರಗಳು ತಲೆ ಎತ್ತಿವೆ. ಮಹಾದ್ವಾರದ ಮಧ್ಯಭಾಗದಲ್ಲಿ ಹಳದಿ-ಕೆಂಪು ಹೂವುಗಳಿಂದ 'ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು' ಎಂಬ ಬರಹ ಮೂಡಿಬಂದಿದೆ. ರಾಣಿ ಚನ್ನಮ್ಮ ಪುತ್ಥಳಿಗೂ ವಿಶೇಷ ಅಲಂಕಾರ ಮಾಡಲಾಗುತ್ತಿದ್ದು, ನಗರದಾದ್ಯಂತ ರಾಜ್ಯೋತ್ಸವದ ಶುಭಾಶಯ ಕೋರುವ ಬ್ಯಾನರ್‌ಗಳು ರಾರಾಜಿಸುತ್ತಿವೆ.

ಇನ್ನು ರಾಜ್ಯೋತ್ಸವ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಲಿರುವ ರೂಪಕಗಳ ತಯಾರಿಕೆಯೂ ಭರದಿಂದ ಸಾಗಿದೆ. ಗೋಲ್ಡನ್ ಟೆಂಪಲ್‌ನಲ್ಲಿ ಮಹಾಪುರುಷರ ಭಾವಚಿತ್ರಗಳು, ಚಿತ್ರದುರ್ಗದ ವೀರ ಮದಕರಿನಾಯಕನ ಕೋಟೆ, ಸರ್ಕಾರಿ ಶಾಲೆಯ ಮಾದರಿ ಹಾಗೂ ಐತಿಹಾಸಿಕ ಐಹೊಳೆಯ ದುರ್ಗಾದೇವಿ ಮಂದಿರ ಸೇರಿದಂತೆ ಕನ್ನಡ ನಾಡಿನ ಇತಿಹಾಸ, ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿಬಿಂಬಿಸುವ ವೈವಿಧ್ಯಮಯ ರೂಪಕಗಳನ್ನು ಸಿದ್ಧಪಡಿಸಲಾಗುತ್ತಿದೆ.

ಪ್ರತಿ ವರ್ಷ ತಮ್ಮ ವಿಶಿಷ್ಟ ಕಲಾಕೃತಿಗಳ ಮೂಲಕ ರಾಜ್ಯೋತ್ಸವದ ಮೆರುಗು ಹೆಚ್ಚಿಸುತ್ತಿರುವ ಕಲಾವಿದ ಆಕಾಶ ಹಲಗೇಕರ್ ಅವರ ರೂಪಕಗಳಿಗೆ ಸಾರ್ವಜನಿಕರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಬಾರಿಯೂ ಹೊಸತನದೊಂದಿಗೆ ಸಿದ್ಧಗೊಳ್ಳುತ್ತಿರುವ ರೂಪಕಗಳು ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗುವ ನಿರೀಕ್ಷೆಯಿದೆ.

ಮಧ್ಯರಾತ್ರಿಯಿಂದಲೇ ರಾಜ್ಯೋತ್ಸವದ ಸಂಭ್ರಮ ಆರಂಭವಾಗಲಿದ್ದು, ಕನ್ನಡಾಭಿಮಾನಿಗಳಲ್ಲಿ ಹಬ್ಬದ ಉತ್ಸಾಹ ಮನೆಮಾಡಿದೆ. ನಾಡು-ನುಡಿಯ ವೈಭವವನ್ನು ಸಾರಲು ಕುಂದಾನಗರಿ ಬೆಳಗಾವಿ ಸಜ್ಜಾಗಿದೆ.

Edited By :
PublicNext

PublicNext

01/11/2026 08:55 am

Cinque Terre

6.92 K

Cinque Terre

0

ಸಂಬಂಧಿತ ಸುದ್ದಿ