ಅಥಣಿ : ನಗರದಲ್ಲಿ 71ನೇ ಕನ್ನಡ ರಾಜ್ಯೋತ್ಸವದ ಅದ್ದೂರಿ ಆಚರಣೆ | ಕನ್ನಡದ ಕಂಪು ಪಸರಿಸಿದ ಬೀದಿ ಬೀದಿಗಳು | ಸಾಂಸ್ಕೃತಿಕ ಮೆರವಣಿಗೆಯಲ್ಲಿ ಗಮನ ಸೆಳೆದ ಎತ್ತಿನ ಬಂಡಿ
ಗಡಿನಾಡಿನ ಅಥಣಿ ನಗರದಲ್ಲಿ ಕನ್ನಡದ ಸಂಭ್ರಮ ಮುಗಿಲು ಮುಟ್ಟಿತ್ತು. ಎಲ್ಲಿ ನೋಡಿದರೂ ಕನ್ನಡದ ಬಾವುಟ, ಬಣ್ಣಬಣ್ಣದ ರಂಗೋಲಿ, ಕನ್ನಡದ ಕಂಪು ಹಾಗೂ ಸಾಂಸ್ಕೃತಿಕ ವೈಭವ ಕಂಡುಬಂದಿತು. ಮಕ್ಕಳ ಆಕರ್ಷಕ ವೇಷಭೂಷಣ ಕಂಡು ಜನರು ಮನಸೋತರೆ, ವಿವಿಧ ಕಲಾತಂಡಗಳ ಪ್ರದರ್ಶನ ಕನ್ನಡಿಗರ ಮನದಲ್ಲಿ ಅಭಿಮಾನ ಮೂಡಿಸಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ನಗರದಲ್ಲಿ ಅದ್ದೂರಿ ಮೆರವಣಿಗೆ ನಡೆಯಿತು. ನಗರದ ರಸ್ತೆಗಳುದ್ದಕ್ಕೂ ಬಿಡಿಸಲಾಗಿದ್ದ ಬಣ್ಣಬಣ್ಣದ ರಂಗೋಲಿಗಳು ಹಬ್ಬದ ಸೊಬಗನ್ನು ಹೆಚ್ಚಿಸಿದವು. ಬಸವಣ್ಣ, ಅಕ್ಕಮಹಾದೇವಿ ಸೇರಿದಂತೆ ನಾಡಿನ ಶರಣರ ವೇಷದಲ್ಲಿ ಮಕ್ಕಳು ಗಮನ ಸೆಳೆದರು. ರೈತರ ಹೋರಾಟದ ಸಂದೇಶ, ಕನ್ನಡ ನಾಡಿನ ಇತಿಹಾಸ ಹಾಗೂ ಸಂಸ್ಕೃತಿಯನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು. ನಟ ಹಾಗೂ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಡಾ. ಅನಂತ್ ನಾಗ್ ಅವರ ರೂಪದಲ್ಲಿದ್ದ ಕಲಾವಿದರೂ ಜನರ ಗಮನ ಸೆಳೆದರು. ಅಸಲಿ ಎತ್ತಿನ ಬಂಡಿಯೂ ಮೆರವಣಿಗೆಯಲ್ಲಿ ಸಾಗಿದ್ದು ವಿಶೇಷ ಆಕರ್ಷಣೆಯಾಗಿತ್ತು. ಡೊಳ್ಳು, ತಾಳ ಹಾಗೂ ವಿವಿಧ ಕಲಾತಂಡಗಳ ಸದ್ದಿಗೆ ಇಡೀ ನಗರವೇ ಕನ್ನಡಮಯವಾಗಿತ್ತು.
ಇನ್ನು ಮಕ್ಕಳ ದೇಶಭಕ್ತಿ ಹಾಗೂ ಸಾಂಸ್ಕೃತಿಕ ಪ್ರದರ್ಶನಗಳು ನೆರೆದಿದ್ದ ಜನರ ಮನ ಗೆದ್ದವು. ಕನ್ನಡ ನಾಡು, ನುಡಿ, ನೆಲ, ಜಲದ ಮಹತ್ವ ಸಾರುವ ಕಾರ್ಯಕ್ರಮಗಳು ರಾಜ್ಯೋತ್ಸವದ ಸಂಭ್ರಮವನ್ನು ಇಮ್ಮಡಿಗೊಳಿಸಿದವು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಗಡಿನಾಡಿನ ಅಥಣಿಯಲ್ಲಿ ಕನ್ನಡದ ಕಹಳೆ ಮೊಳಗಿಸುವ ಮೂಲಕ ಕನ್ನಡಿಗರು ನಾಡುನುಡಿಯ ಮೇಲಿನ ತಮ್ಮ ಅಭಿಮಾನವನ್ನು ಮತ್ತೊಮ್ಮೆ ಸಾರಿದರು.
PublicNext
02/11/2026 08:15 am
LOADING...