ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು : ಕಾರು ಢಿಕ್ಕಿ- ಬೈಕ್ ಸಹಸವಾರ ಸಾವು

ಮಂಗಳೂರು : ಬೈಕ್ ಗೆ ಹಿಂಬದಿಯಿಂದ ಕಾರು ಢಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಸಹಸವಾರ ನಾವೂರು ಗ್ರಾಮದ ಕನಪಾದೆ ನಿವಾಸಿ ಗೋಪಾಲ (55) ಅವರು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ

ಗಂಜಿಮಠದ ಕೆಂಪುಕಲ್ಲಿನ ಕೋರೆಯಲ್ಲಿ ಕೆಲಸ ಮುಗಿಸಿ ಝಕಾರಿಯಾ ಅವರು ಗೋಪಾಲ ಅವರನ್ನು ಸಹಸವಾರರನ್ನಾಗಿ ಬೈಕ್‌ನಲ್ಲಿ ಬಿ.ಸಿ.ರೋಡು ಮಾರ್ಗವಾಗಿ ಬೆಳ್ತಂಗಡಿ ರಸ್ತೆಯಲ್ಲಿ ಕನಪಾದೆ ಮನೆ ಕಡೆಗೆ ತೆರಳುತ್ತಿದ್ದರು. ರಾತ್ರಿ ಮಣ್ಣಾಪು ತಲುಪಿದಾಗ ಅಲ್ಲಿ ಬೇರೆ ಅಪಘಾತವೊಂದು ಆದ ಕಾರಣದಿಂದ ರಸ್ತೆ ಬ್ಲಾಕ್ ಆಗಿತ್ತು. ಹೀಗಾಗಿ ಬೈಕ್ ನಿಲ್ಲಿಸಲಾಗಿತ್ತು. ಈ ವೇಳೆ ಹಿಂಬದಿಯಿಂದ ಬಂದ ಕಾರು ಬೈಕ್ ಗೆ ಢಿಕ್ಕಿಯಾಗಿ ಈ ಘಟನೆ ಸಂಭವಿಸಿದೆ. ಮೃತರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಢಿಕ್ಕಿಯ ರಭಸಕ್ಕೆ ಬೈಕ್‌ನಲ್ಲಿದ್ದ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟು ಗಾಯಗೊಂಡಿದ್ದರು. ಗೋಪಾಲ ಅವರ ತಲೆ, ಎದೆ, ಕೈ, ಕಾಲು ಹಾಗೂ ಮೂಗಿಗೆ ಗಂಭೀರ ಗಾಯಗಳಾಗಿತ್ತು. ಝಕಾರಿಯಾ ಅವರ ಮುಖ ಮತ್ತು ಬೆನ್ನಿಗೆ ಗಾಯಗಳಾಗಿದ್ದವು. ಸ್ಥಳೀಯರು ಗಾಯಾಳುಗಳನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಿದ್ದರು. ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗೋಪಾಲ ಅವರು ರಾತ್ರಿ ಮೃತಪಟ್ಟಿದ್ದಾರೆ. ಕಾರು ಚಾಲಕ ಆಪ್ರೀದ್ ಅವರ ವಿರುದ್ದ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Edited By : PublicNext Desk
PublicNext

PublicNext

01/11/2026 12:57 pm

Cinque Terre

2.84 K

Cinque Terre

0

ಸಂಬಂಧಿತ ಸುದ್ದಿ