ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು : ನಡುರಾತ್ರಿ ಸಮುದ್ರದಲ್ಲಿ ಸಾಹಸ ಮೆರೆದ ಕರಾವಳಿ ಕಾವಲು ಪಡೆ – ನೀರಿಗೆ ಬಿದ್ದ ಮೀನುಗಾರನ ರಕ್ಷಣೆ

ಮಂಗಳೂರು : ಕಗ್ಗತ್ತಲ ಸಮುದ್ರದಲ್ಲಿ ಬಲೆ ಎಳೆಯುವ ವೇಳೆ ಆಯತಪ್ಪಿ ನೀರಿಗೆ ಬಿದ್ದ ಮೀನುಗಾರನನ್ನು ಭಾರತೀಯ ಕರಾವಳಿ ಕಾವಲು ಪಡೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ರಕ್ಷಿಸಿದೆ. ಮಂಗಳೂರಿನಿಂದ ಸುಮಾರು 100 ಕಿ.ಮೀ. ದೂರದ ಆಳ ಸಮುದ್ರದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಅಸ್ವಸ್ಥಗೊಂಡಿದ್ದ ಮೀನುಗಾರನನ್ನು ಸುರಕ್ಷಿತವಾಗಿ ದಡಕ್ಕೆ ತಂದು ಆಸ್ಪತ್ರೆಗೆ ದಾಖಲಿಸಲಾಗಿದೆ.

ನ.1ರ ಮಧ್ಯರಾತ್ರಿ 'ಶಿವಸಾಗರ್' (IFB SHIV SAGAR) ಎಂಬ ಮೀನುಗಾರಿಕಾ ಬೋಟ್‌ನಲ್ಲಿ ಮೀನುಗಾರರು ಬಲೆ ಎಳೆಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಬಲೆ ಎಳೆಯುವಾಗ ಆಯತಪ್ಪಿದ ಮೀನುಗಾರನೊಬ್ಬ ಸಮುದ್ರದ ನೀರಿಗೆ ಬಿದ್ದಿದ್ದಾನೆ. ತಕ್ಷಣವೇ ಕಾರ್ಯಪ್ರವೃತ್ತರಾದ ಸಹ ಮೀನುಗಾರರು ಆತನನ್ನು ನೀರಿನಿಂದ ಮೇಲಕ್ಕೆತ್ತಿದರೂ, ಆತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕಾರಣ ತುರ್ತು ವೈದ್ಯಕೀಯ ನೆರವಿನ ಅಗತ್ಯ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಬೋಟ್‌ನ ಸಿಬ್ಬಂದಿ ವಿಎಚ್‌ಎಫ್ ವೈರ್‌ಲೆಸ್ ಮೂಲಕ ಮಂಗಳೂರಿನ ಕರಾವಳಿ ಕಾವಲು ಪಡೆಯ ಪ್ರಧಾನ ಕಚೇರಿ (CGDHQ-3)ಗೆ ರಕ್ಷಣಾ ಸಂದೇಶ ರವಾನಿಸಿದರು.

ಸಂದೇಶ ಸ್ವೀಕರಿಸಿದ ಕರಾವಳಿ ಕಾವಲು ಪಡೆ ತಕ್ಷಣವೇ 'ಐಸಿಜಿಎಸ್ ಸಿ-448' (ICGS C-448) ಇಂಟರ್‌ಸೆಪ್ಟರ್ ನೌಕೆಯನ್ನು ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಿತು. ಪ್ರತಿಕೂಲ ಸಮುದ್ರ ಪರಿಸ್ಥಿತಿ ಹಾಗೂ ರಾತ್ರಿಯ ಕತ್ತಲೆಯ ನಡುವೆಯೂ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಮೀನುಗಾರಿಕಾ ಬೋಟ್‌ನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು.

ಬಳಿಕ ಅಸ್ವಸ್ಥ ಮೀನುಗಾರನನ್ನು ಎಚ್ಚರಿಕೆಯಿಂದ ರಕ್ಷಣಾ ನೌಕೆಗೆ ಸ್ಥಳಾಂತರಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಅಲ್ಲಿಂದ ನವಮಂಗಳೂರು ಬಂದರು ಪ್ರಾಧಿಕಾರದ (ಎನ್‌ಎಂಪಿಎ) ಜೆಟ್ಟಿಗೆ ಕರೆತಂದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು.

ಆಳ ಸಮುದ್ರದಲ್ಲಿ ಮಧ್ಯರಾತ್ರಿ ನಡೆದ ಈ ತುರ್ತು ಕಾರ್ಯಾಚರಣೆಯ ಮೂಲಕ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಮೀನುಗಾರನ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಕರಾವಳಿ ಕಾವಲು ಪಡೆ ಪ್ರಕಟಣೆ ತಿಳಿಸಿದೆ.

Edited By :
PublicNext

PublicNext

02/11/2026 11:32 am

Cinque Terre

7.48 K

Cinque Terre

0

ಸಂಬಂಧಿತ ಸುದ್ದಿ